ADVERTISEMENT

ಸಂತ ಅಂತೋಣಿ ವಾರ್ಷಿಕೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 9:03 IST
Last Updated 14 ಜೂನ್ 2017, 9:03 IST
ಕೆ.ಆರ್.ನಗರ ತಾಲ್ಲೂಕಿನ ಡೋರ್ನಹಳ್ಳಿಯಲ್ಲಿ ಸಂತ ಅಂತೋಣಿ ಅವರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ  ಮಂಗಳವಾರ ಅದ್ಧೂರಿಯಾಗಿ ನಡೆಯಿತು
ಕೆ.ಆರ್.ನಗರ ತಾಲ್ಲೂಕಿನ ಡೋರ್ನಹಳ್ಳಿಯಲ್ಲಿ ಸಂತ ಅಂತೋಣಿ ಅವರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ನಡೆಯಿತು   

ಕೆ.ಆರ್.ನಗರ: ತಾಲ್ಲೂಕಿನ ಡೋರ್ನಹಳ್ಳಿಯಲ್ಲಿ ಸಂತ ಅಂತೋಣಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ (ಹಬ್ಬದ ದಿನ) ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಅವರಿಂದ ಗಾಯನ ಬಲಿಪೂಜೆ, ಜಂಗಲ್ ಪೇಟ್ ಸಂತ ಜೋಸೆಫರ ಗುರುಮಠದ ನಿರ್ದೇಶಕ ವಂ ಗುರು ಯೇಸು ಅಂತೋಣಿ ಅವರಿಂದ ತಮಿಳಿನಲ್ಲಿ ಗಾಯನ ಬಲಿ ಪೂಜೆ, ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಟಿ.ಅಂತೋಣಿ ಸ್ವಾಮಿ ಅವರಿಂದ ಗಾಯನ ಬಲಿ ಪೂಜೆ ನಡೆಯಿತು.

ಡೋರ್ನಹಳ್ಳಿ ಸಂತ ಅಂತೋಣಿ ಅವರ ಪುಣ್ಯ ಕ್ಷೇತ್ರದಲ್ಲಿ ಜೂನ್ 4ರಂದು ಮೈಸೂರು ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷ ಡಾ.ಥಾಮಸ್ ಆಂಟನಿ ವಾಳಪಿಳೈ ಅವರು ಧ್ವಜಾರೋಹಣ ಮಾಡುವ ಮೂಲಕ 9 ದಿನಗಳ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿದ್ದರು.

ನವದಿನಗಳ ಪ್ರಬೋಧನೆ ಮತ್ತು ಬಲಿಪೂಜೆಯಲ್ಲಿ ಬೆಂಗಳೂರಿನ ಪ್ರಬೋಧಕ  ಪ್ರವೀಣ್ ಕುಮಾರ್, ಚಿಕ್ಕಮಗಳೂರು ಧರ್ಮಕ್ಷೇತ್ರದ ಪ್ರಬೋಧಕ ಪ್ಯಾಟ್ರಿಕ್ ಜೋನಾಸ್ ರಾವ್, ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೋ, ಪಶ್ಚಿಮ ಬಂಗಾಳದ ಅಸನ್ಸೋಲ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಸಿಪ್ರಿಯನ್ ಮೊನಿಸ್ ಭಾಗವಹಿಸಿದ್ದರು.

ADVERTISEMENT

ವಾರ್ಷಿಕೋತ್ಸವಕ್ಕೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶದ ನಾನಾ ಭಾಗಗಳಿಂದ ರೈಲು, ಬಸ್, ಕಾರು ಮತ್ತು ದ್ವಿಚಕ್ರವಾಹನಗಳ ಮೂಲಕ ಮಹಿಳೆಯರು, ಮಕ್ಕಳು, ಯುವಕ, ಯುವತಿಯರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ಮುಡಿ ಕೊಟ್ಟು ಸ್ನಾನ ಮಾಡಿದರು. ಚರ್ಚ್‌ಗೆ ತೆರಳಿ ಮೆಣದ ಬತ್ತಿ ಹಚ್ಚಿದರು. ಚರ್ಚ್‌ನಲ್ಲಿ ನಡೆದ ವಿಶೇಷ ಪೂಜೆಗಳಲ್ಲಿ ಭಾಗವಹಿಸಿದರು. ಇಷ್ಟಾರ್ಥ ನೆರವೇರಿಸುವಂತೆ ಏಸುವಿನಲ್ಲಿ ಬೇಡಿಕೊಂಡರು. ಕೆಲವು ಭಕ್ತರು ಕ್ಷೇತ್ರಕ್ಕೆ ಸಾವಿರಾರು ರೂಪಾಯಿ ದೇಣಿಗೆ ನೀಡಿದರು. ಕೆಲವರು ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಸೇವಿಸಿದರು.

ಸಂಜೆ ಸಂತ ಅಂತೋಣಿ ಅವರ ಶೃಂಗಾರ ಭರಿತ ವೈಭವ ತೇರು ಮೆರವಣಿಗೆ ನಡೆಯಿತು. ಕ್ಷೇತ್ರದ ಧರ್ಮಗುರು ಫಾದರ್ ಡಾ.ಆರ್. ಆರೋಗ್ಯಸ್ವಾಮಿ ನೇತೃತ್ವದಲ್ಲಿ  ಎಲ್ಲ ಕಾರ್ಯಕ್ರಮಗಳು ನಡೆದವು. ಭಕ್ತರಿಗಾಗಿ ಬಸ್ ವ್ಯವಸ್ಥೆ, ಕುಡಿಯುವ ನೀರು, ಆಸ್ಪತ್ರೆ, ಅಂಬುಲೆನ್ಸ್ ಸೇವೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.