ADVERTISEMENT

ಸಂಭ್ರಮದ ಕೃಷ್ಣಜನ್ಮಾಷ್ಟಮಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:30 IST
Last Updated 2 ಸೆಪ್ಟೆಂಬರ್ 2013, 6:30 IST

ಕುಶಾಲನಗರ: ನಲವತ್ತು ವರ್ಷಗಳಿಂದ ನಿಂತು ಹೋಗಿದ್ದ ಗೋಪುರ ನಿರ್ಮಾಣ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಕುಶಾಲನಗರಲ್ಲಿ ಭಾನುವಾರ ಸಂಭ್ರಮದಿಂದ ಜರುಗಿತು. ಈ ಮೂಲಕ ನೆರೆದಿದ್ದ ನೂರಾರು ವೀಕ್ಷಕರ ಮನಸೂರೆಗೊಳಿಸಿತು.

ಪಟ್ಟಣದ ಪೊಲೀಸ್ ಮೈದಾನದಲ್ಲಿ ಭಾನುವಾರ ಶ್ರಿಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರಿ ಕೃಷ್ಣಜನ್ಮಾಷ್ಟಮಿ ಆಚರಣಾ ಸಮಿತಿ, ಕಾವೇರಿ ಕಲಾಪರಿಷತ್ ಮತ್ತು ವಿವಿಧ ಭಜನಾ ಮಂಡಳಿಗಳ ನೇತೃತ್ವದಲ್ಲಿ ನಡೆದ ಗೋಪುರ ನಿರ್ಮಿಸಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ವಿವಿಧ ಆಟಗಳು ನೋಡುಗರ ಮನಸೂರೆಗೊಳಿಸಿದವು.

20 ಅಡಿ ಎತ್ತರದಲ್ಲಿದ್ದ ಮೊಸರು ಕುಡಿಕೆ ಒಡೆಯಲು ಜಿಲ್ಲೆಯ ವಿವಿಧ ಗ್ರಾಮಗಳಿಂದ ಐದು ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಸೋಮವಾರಪೇಟೆಯ ಕನಯ್ಯ ತಂಡವು ಕೇವಲ 21.56 ಸೆಕೆಂಡುಗಳಲ್ಲಿ ಗೋಪುರ ನಿರ್ಮಾಣ ಮಾಡಿ ಮೊಸರು ಕುಡಿಕೆ ಒಡೆಯಿತು.

ವಿವಿಧ ಸ್ಪರ್ಧೆಗಳಿಗೂ ಮುನ್ನಾ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಒಂದು ವರ್ಷದಿಂದ ಮೂರು ವರ್ಷದ ವಯಸ್ಸಿನ ಮಕ್ಕಳಿಗೆ ಕೃಷ್ಣನ ಛದ್ಮವೇಶ ಸ್ಪರ್ಧೆ ನಡೆಯಿತು.

ಕೃಷ್ಣನ ವೇಷ ಧರಿಸಿದ್ದ ಹಲವು ಮಕ್ಕಳು ತುಂಟಾಟ ಆಡುವ ಮೂಲಕ ನೆರೆದಿದ್ದವರ ಕಣ್ಮನ ಸೆಳೆದವು.
ಬಾಲಕ ಬಾಲಕಿಯರಿಗಾಗಿ ಏರ್ಪಡಿಸಿದ್ದ ಕಣ್ಣಿಗೆ ಬಟ್ಟೆ ಕಟ್ಟೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸುವ ಮೂಲಕ ಸಂಭ್ರಮಿಸಿದರು.

ನಲವತ್ತು ವರ್ಷಗಳ ಹಿಂದೆ ನಡೆಯುತ್ತಿದ್ದ ಶ್ರಿಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಭಾನುವಾರ ಸಂಭ್ರಮ ಸಡಗರದಿಂದ ನಡೆಯುವ ಮೂಲಕ ನೋಡುಗರಿಗೆ ರಸದೌತಣ ಉಣಬಡಿಸಿತು.

ಗೋಣಿಕೊಪ್ಪಲು ವರದಿ:
ಕರ್ನಾಟಕ ರಕ್ಷಣಾ ವೇದಿಕೆ ಪೊನ್ನಂಪೇಟೆ ಘಟಕದ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಭಾನುವಾರ ಅದ್ಧೂರಿಯಾಗಿ ಆಚರಿಸಲಾಯಿತು. 

ಪೊನ್ನಂಪೇಟೆ ಕುಂದ ರಸ್ತೆಯ ಅರಣ್ಯ ಕಾಲೇಜಿನ ಹೆಬ್ಬಾಗಿಲಿನಿಂದ ಹುದಿಕೇರಿ ರಸ್ತೆಯ ರಾಮಕೃಷ್ಣ ಶಾರದಾಶ್ರಮದವರೆಗೆ ನಡೆದ ಮೆರವಣಿಗೆಯಲ್ಲಿ ಕೇರಳದ ಚಂಡ ಮದ್ದಳೆ, ಬೆಳ್ಗೊಡೆ, ಛತ್ರಿಛಾಮರಗಳು    ರಾರಾಜಿಸಿದವು. ಕೃಷ್ಣನ ಭಾವಚಿತ್ರ, ಭುವನೇಶ್ವರಿ ಭಾವಚಿತ್ರ, ಕೃಷ್ಣ ವೇಶಧಾರಿಗಳು, ಬಾಲ ಕೃಷ್ಣನ ವೇಶತೊಟ್ಟ ಪುಟಾಣಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲರ ಗಮನಸೆಳೆದರು.

ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ಜನತೆ  ಕನ್ನಡದ ಕಂಪು ಬೀರುವ ಅರಿಶಿನ ಕುಂಕುಮದ ಶಲ್ಯತೊಟ್ಟು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.

ರಕ್ಷಣಾ ವೇದಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮೊಸರಿನ ಮಡಕೆ ಒಡೆಯುವ   ಸ್ಪರ್ಧೆ, ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ನೃತ್ಯ ಸಂಗಿತ ಮೊದಲಾದ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ನಾಡು  ನುಡಿ ರಕ್ಷಣೆಗೆ ರಕ್ಷಣಾ ವೇದಿಕೆ ಟೊಂಕಕಟ್ಟಿ ನಿಂತಿದೆ. ಕಾವೇರಿ  ನೀರಿನ ನ್ಯಾಯಯುತ ಪರಿಹಾರಕ್ಕೆ ನಿರಂತರವಾಗಿ ಹೋರಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಘಟಕದ ಅಧ್ಯಕ್ಷ ವಿ.ಬಿ. ರುದ್ರಪ್ಪ ಮಾತನಾಡಿದರು. ತಾಲ್ಲೂಕು ಘಕಟದ ಅಧ್ಯಕ್ಷ ಪ್ರವೀಣ್ ಪುಜಾರಿ, ಪೊನ್ನಂಪೇಟೆ ಹೋಬಳಿ ಘಟಕದ ಉಪಾಧ್ಯಕ್ಷ ಪಿ.ಟಿ.ರಮೇಶ್, ಕಾರ್ಯದರ್ಶಿ ಎಚ್.ಬಿ.ಸುರೇಶ್, ಕಾನೂನು ಸಲಹೆಗಾರ ಮಂಜುನಾಥ್, ಸಹಕಾರ್ಯದರ್ಶಿ ಎಚ್.ಎಸ್. ಮಹದೇವ್, ಖಜಾಂಜಿ ಎಂ.ಎಂ.ದಿಲೀಪ್,  ಸದಸ್ಯರಾದ ಪಿಟಿ.ಸುರೇಶ್, ಕೆ.ಬಿ.ವಿನು, ಸುದರ್ಶನ್, ಮುಂತಾದವರು ಹಾಜರಿದ್ದರು. ಕಾರ್ಯದರ್ಶಿ ಹರೀಶ್ ಸ್ವಾಗತಿಸಿದರು. ಎಸ್.ಟಿ. ಗಿರೀಶ್ ನಾಡಗೀತೆ ಹಾಡಿದರು. ಶಿಕ್ಷಕಿ ಚಂದನಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.