ವಿರಾಜಪೇಟೆ: ಸಮೀಪದ ಕುಕ್ಲೂರು ಮುತ್ತಪ್ಪ ದೇವರ ತೆರೆ ಮಹೋತ್ಸವವನ್ನು ಬುಧವಾರ ಹಾಗೂ ಗುರುವಾರ ಭಕ್ತಿಯಿಂದ ಆಚರಿಸಲಾಯಿತು.
93 ವರ್ಷಗಳ ಇತಿಹಾಸವಿರುವ ಕುಕ್ಲೂರಿನ ಮುತ್ತಪ್ಪ ದೇವಾಲಯದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು.
ಬುಧವಾರ ಸಂಜೆ 5.30ಕ್ಕೆ ಮುತ್ತಪ್ಪ ವೆಳ್ಳಾಟಂ ನಂತರ ರಾತ್ರಿ ಶಾಸ್ತಪ್ಪ ಹಾಗೂ ಗುಳಿಗನ ವೆಳ್ಳಾಟಂ ನಡೆಯಿತು. ಮಧ್ಯರಾತ್ರಿ ಪಟ್ಟಣದ ಶಿವಕೇರಿಯ ಪಂಪ್‌ಹೌಸ್ ಬಳಿಯಿಂದ ಆರಂಭಗೊಂಡ ಬಸುರಿ ಮಲೆ ವೆಳ್ಳಾಟಂ ಕುಕ್ಲೂರಿನ ಮುತ್ತಪ್ಪ ದೇವಾಲಯದಲ್ಲಿರುವ ಸನ್ನಿಧಿ ತಲುಪಿತು.
ಈ ಸಂದರ್ಭದಲ್ಲಿ ಬಸುರಿ ಮಲೆ ವೆಳ್ಳಾಟಂನೊಂದಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯದತ್ತ ಹೆಜ್ಜೆ ಹಾಕಿದರು. ರಾತ್ರಿ 2 ಗಂಟೆಗೆ ನಡೆದ ಆಕರ್ಷಕ ಸಿಡಿಮದ್ದು ಕಾರ್ಯಕ್ರಮ ಗಮನ ಸೆಳೆಯಿತು.
ಗುರುವಾರ ಮುಂಜಾನೆ 4ರಿಂದ ಗುಳಿಗನ ತೆರೆಯಿಂದ ಎರಡನೇ ದಿನದ ಉತ್ಸವವು ಆರಂಭಗೊಂಡಿತು. ನಂತರ ಮುತ್ತಪ್ಪನ್, ತಿರುವಪ್ಪನ್, ಶಾಸ್ತಪ್ಪನ್ ಹಾಗೂ ಬಸುರಿ ಮಲೆ ತೆರೆಯೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಎರಡು ದಿನಗಳ ಕಾಲ ನಡೆದ ಉತ್ಸವದ ಸಮಯದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.