ADVERTISEMENT

ಸಮಾಜ ಅಭಿವೃದ್ಧಿಗೆ ಒತ್ತು ನೀಡಿ: ಯೋಗೀಶ್

​ಪ್ರಜಾವಾಣಿ ವಾರ್ತೆ
Published 10 ಮೇ 2012, 8:15 IST
Last Updated 10 ಮೇ 2012, 8:15 IST

ನಾಪೋಕ್ಲು: ಕುಟುಂಬದ ಅಭಿವೃದ್ಧಿ ಜತೆಗೆ ಸಮಾಜವನ್ನೂ ಪ್ರಗತಿಯತ್ತ ಒಯ್ಯಿರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸುಳ್ಯ-ಮಡಿಕೇರಿಯ ಯೋಜನಾಧಿಕಾರಿ ಎ.ಯೋಗೀಶ್ ಹೇಳಿದರು.

ಮೂರ್ನಾಡು ಕೊಡವ ಸಮಾಜದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಮಂಗಳವಾರ ನಡೆದ ಕಾಂತೂರು-ಮೂರ್ನಾಡು ಪ್ರಗತಿಬಂಧು ಸ್ವಸಹಾಯ ಸಂಘ, ಪಾರಾಣೆ, ಹೊದ್ದೂರು, ವಾಟೆಕಾಡು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜನರು ಆರ್ಥಿಕವಾಗಿ ಸಬಲರಾಗಿ, ಸಾಮಾಜಿಕವಾಗಿ ಸಂಘಟಿತರಾಗಲು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆ ಪ್ರೇರಣೆ ಎಂದರು.

ಯೋಜನೆ ಪ್ರಾರಂಭಗೊಂಡು ಈಗ 17 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಕೇರಳದ ಕಾಸರಗೋಡು ಹಾಗೂ ಕುಂಬ್ಳೆಯಲ್ಲಿ ಜಾರಿಯಾಗಿದೆ. ಸುಳ್ಯ-ಮಡಿಕೇರಿಯಲ್ಲಿ ಸದಸ್ಯರು ಉಳಿತಾಯ ಮಾಡುವ 10ರೂಪಾಯಿಗಳು ಈಗ ರೂ. 12 ಕೋಟಿಯಾಗಿದ್ದು ದೊಡ್ಡ ನಿಧಿಯಾಗಿದೆ. ಸಂಘದ ಸದಸ್ಯರಿಗೆ 7 ವರ್ಷದಲ್ಲಿ 93 ಕೋಟಿ ಸಾಲ ನೀಡಿದ್ದು, ಮರುಪಾವತಿಯು ಕೂಡ ವ್ಯತ್ಯಾಸವಿಲ್ಲದೇ ಸಾಗುತ್ತಿದೆ. 30 ಕೋಟಿ ರೂಪಾಯಿಗಳು ಮಾತ್ರ ಮರುಪಾವತಿಯಾಗಬೇಕಿದೆ. ಇಲ್ಲಿ ಹಣವೂ ಉತ್ತಮ ರೀತಿಯಲ್ಲಿ ವಿನಿಯೋಗವಾಗಿದ್ದು ಸಮಾಜದಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿದ್ದು ಅಭಿವೃದ್ಧಿಯಾಗಿದೆ ಎಂದರು.

ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪಾರ್ವತಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಬೊಳ್ಳಚೆಟ್ಟಿರ ಸುರೇಶ್, ಮೂರ್ನಾಡು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಮಾಜಿ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಮತ್ತು ಹೊದ್ದೂರು ಗ್ರಾಮ ಪಂಚಾಯಿತಿಮಾಜಿ ಅಧ್ಯಕ್ಷ ಕೂಡಂಡ ಪುರುಷೋತ್ತಮ್ ಮಾತನಾಡಿದರು.

ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಕೇಶವ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಜನೆಯ ಕಾರ್ಯಕ್ರಮಗಳೆಲ್ಲವೂ ಪ್ರಗತಿಯತ್ತ ಸಾಗಬೇಕಾದರೆ ಸಂಘದ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಕಾಂತೂರು-ಮೂರ್ನಾಡು ಸೇವಾನಿರತೆ ಸವಿತಾ ಶೆಟ್ಟಿ, ಪಾರಾಣೆ-ಹೊದ್ದೂರು ಸೇವಾನಿರತ ಪ್ರದೀಪ್, ಗ್ರಾಮಾಭಿವದ್ದಿ ಯೋಜನೆಯ ಮೇಲ್ವಿಚಾರಕ ಉಮೇಶ್ ಉಪಸ್ಥಿತರಿದ್ದರು. ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.