ADVERTISEMENT

ಸರ್ಕಾರದ ಜತೆ ಸಂಘರ್ಷವಿಲ್ಲ: ಕಾರ್ಯಪ್ಪ

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 6:35 IST
Last Updated 17 ಜುಲೈ 2013, 6:35 IST

ಮಡಿಕೇರಿ: `ಕಾಂಗ್ರೆಸ್ ಸರ್ಕಾರದ ಜೊತೆ ನಾನು ಸಂಘರ್ಷಕ್ಕೆ ಇಳಿದಿಲ್ಲ. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ತೊರೆಯಲು ನನ್ನದೇನೂ ಅಭ್ಯಂತರವಿಲ್ಲ. ಆದರೆ, ಯಾವ ಆಧಾರದ ಮೇಲೆ ನಾನು ಬಿಡಬೇಕು. ಇದಕ್ಕೊಂದು ನೀತಿ, ನಿಯಮ ಬೇಡವೇ? ಇದನ್ನೆಲ್ಲ ಒಳಗೊಂಡಂತೆ ಸಾಂಸ್ಕೃತಿಕ ನೀತಿಯನ್ನು ರೂಪಿಸಬೇಕೆನ್ನುವುದೇ ನನ್ನ ಬೇಡಿಕೆ' ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಅಕಾಡೆಮಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವುದು ಸರ್ಕಾರದ ಪರಮೋಚ್ಚ ಅಧಿಕಾರ. ಅದು ಸಹಜ ಕೂಡ. ಆದರೆ, ಇದಕ್ಕೊಂದು ನೀತಿ ಬೇಡವೇ? ಅದನ್ನೇ ನಾನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ. ನನ್ನದು ತಾತ್ವಿಕ ಹೋರಾಟ, ಕಾಂಗ್ರೆಸ್ ಸರ್ಕಾರದ ಜೊತೆಗಿನ ಸಂಘರ್ಷವಲ್ಲ' ಎಂದರು.

`ಮುಂದಿನ ಮೂರು ವರ್ಷಗಳ ಅವಧಿ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಎನ್ನುವುದನ್ನು ನೇಮಕ ಆದೇಶ ಪತ್ರದಲ್ಲಿ ಹೇಳಲಾಗಿರುತ್ತದೆ. ಆದರೆ, ಯಾವ ಮಾನದಂಡದ ಆಧಾರದ ಮೇಲೆ ರಾಜೀನಾಮೆ ಕೇಳಲಾಗುತ್ತದೆ ಎನ್ನುವುದು ನನ್ನ ಪ್ರಶ್ನೆ' ಎಂದು ಅವರು ಹೇಳಿದರು.

`ಸರ್ಕಾರ ಬದಲಾದ ತಕ್ಷಣ ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಹಲವು ಹಿರಿಯ ಸಾಹಿತಿಗಳು ಕೂಡ ನನ್ನ ಮಾತಿಗೆ ಜೊತೆಯಾಗಿದ್ದಾರೆ. ಮೊನ್ನೆ ಬಜೆಟ್ ಮಂಡಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ನೀತಿಯನ್ನು ರಚಿಸುವುದಾಗಿ ಹೇಳಿಕೆ ನೀಡಿದ್ದನ್ನು ಸ್ವಾಗತಿಸುತ್ತೇನೆ' ಎಂದು ಅವರು ಹೇಳಿದರು.

`ರಾಜೀನಾಮೆ ನೀಡುವ ವಿಚಾರವು ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚೇನೂ ಹೇಳಲಾರೆ' ಎಂದು ಅವರು ತಮ್ಮ ಮಾತುಕತೆಯನ್ನು ಮೊಟಕುಗೊಳಿಸಿದರು.

ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರು ವಿರಾಜಪೇಟೆ ತಾಲ್ಲೂಕು ಬಿಜೆಪಿ ವಕ್ತಾರರು. ಅವರನ್ನು ಕೊಡವ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಕಳೆದ ಬಿಜೆಪಿ ಸರ್ಕಾರ ನೇಮಿಸಿತ್ತು. ರಾಜ್ಯದಲ್ಲಿ ಸರ್ಕಾರ ಬದಲಾಗಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದಿನ ಅವಧಿಯಲ್ಲಿ ನೇಮಕವಾಗಿರುವ ನಿಗಮ ಹಾಗೂ ಅಕಾಡೆಮಿಗಳ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ, ಅಡ್ಡಂಡ ಕಾರ್ಯಪ್ಪ ನ್ಯಾಯಾಲಯದ ಮೆಟ್ಟಿಲು ಏರಿದ್ದನ್ನು ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.