ADVERTISEMENT

ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 10:10 IST
Last Updated 12 ಸೆಪ್ಟೆಂಬರ್ 2011, 10:10 IST
ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ
ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ   

ಕುಶಾಲನಗರ: ಸುಂಟಿಕೊಪ್ಪ ಹೋಬಳಿಯ ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆಯು ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 95 ಫಲಿತಾಂಶ ಗಳಿಸಿದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಮತ್ತು ಸಹ ಶಿಕ್ಷಕ ವೃಂದವನ್ನು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಈಚೆಗೆ ಸನ್ಮಾನಿಸಲಾಯಿತು.

ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಡಾ ಎಂ.ಆರ್.ರವಿ, ಗ್ರಾಮಾಂತರ ಪ್ರದೇಶಗಳ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶ ಗಳಿಸಲು ಕಾರಣರಾದ ಗುರುಗಳನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ. ಸಮಾಜದಲ್ಲಿ ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಅವರ ಸೇವೆಯನ್ನು ಸ್ಮರಿಸುವುದು ನಾಗರಿಕ ಸಮಾಜದ ಕರ್ತವ್ಯ ಎಂದರು.

ಹಿಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶದ ಅನೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಅನೇಕರು ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಈ ದಿಸೆಯಲ್ಲಿ ಹಳ್ಳಿಯ ಮಕ್ಕಳು ಶಿಕ್ಷಣ ಹೊಂದುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿದ ಮಡಿಕೇರಿ ನಗರ ಸಭೆ ಅಧ್ಯಕ್ಷ ಎಚ್.ಎಂ.ನಂದಕುಮಾರ್, ಶಿಕ್ಷಕರ ಕರ್ತವ್ಯ ಪ್ರಜ್ಞೆ ಕುರಿತು ಶ್ಲಾಘಿ ಸಿದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಶ್‌ಗೌಡ ಮಾತನಾಡಿ, ಸರ್ಕಾರಿ ಶಾಲೆ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಗ್ರಾಮಸ್ಥರು ಶಾಲೆಯ ಪ್ರಗತಿಗೆ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ದಸಂಸ ಸಂಚಾಲಕ ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾ.ಪಂ. ಸದಸ್ಯರಾದ ರಮೇಶ್, ಚೋಮಣಿ, ದಸಂಸ ಪದಾಧಿಕಾರಿಗಳಾದ ಶಿವಪ್ಪ, ರಫೀಕ್ ಇದ್ದರು.
ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಶಿಕ್ಷಕರಾದ ದಿನೇಶ್, ನವೀನ್, ಲತಾ ವೆಂಕಟೇಶ್ ಪೈ, ಸುಮ, ಮಾರ್ಗರೇಟ್,  ಹರ್ಷಿತ ಸುಂದರ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.