ADVERTISEMENT

‘ಸಾಮರಸ್ಯದ ಸಂಕೇತ ಸಾಹಿತ್ಯ ಸಮ್ಮೇಳನ’

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 6:04 IST
Last Updated 6 ಜೂನ್ 2017, 6:04 IST
ಸಮ್ಮೇಳನವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು
ಸಮ್ಮೇಳನವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು   

ಸೋಮವಾರಪೇಟೆ: ‘ಕನ್ನಡ ಸಾಹಿತ್ಯ ಸಮ್ಮೇಳನ ವಿವಿಧತೆಯಲ್ಲಿ ಏಕತೆ ಬಿಂಬಿಸಲಿದ್ದು, ಎಲ್ಲರನ್ನು ಧರ್ಮೀಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಾಮರಸ್ಯ ಬೆಸೆಯುವ ಕೆಲಸ ಇಲ್ಲಿ ಆಗಲಿದೆ’ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.

5ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಅವರು ಒಕ್ಕಲಿಗರ ಸಮಾಜದ ಸಭಾಂಗಣದಲ್ಲಿ ಸೋಮವಾರ  ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪಕ್ಷ, ಜಾತಿ, ಧರ್ಮ ಭೇದ ಮರೆತು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಭಾಷೆಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದರು ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುವ ಜೊತೆಗೆ ಎಲ್ಲಾ ಉಪ ಭಾಷೆಗಳ ಬೆಳವಣಿಗೆಗೂ ಒತ್ತು ನೀಡಬೇಕು. ಆ ಮೂಲಕ ಕನ್ನಡ ಭಾಷಯ ಬೆಳವಣಿಗೆ ಸಾಧ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ, ಸಾಹಿತ್ಯ ಮತ್ತು ಕವನ ರಚನೆ ದೈವದತ್ತವಾಗಿ ಬಂದಿರುತ್ತದೆ. ಎಲ್ಲರೂ ಸಾಹಿತ್ಯ ಸಂಸ್ಕೃತಿ ಬೆಳೆಸಲು ಕೆಲಸ ಮಾಡಬೇಕು. ಪರಿಷತ್ ಕೊಡಗಿನ ಸಮಗ್ರ ಪರಿಚಯದ ಗ್ರಂಥ ಹೊರತರಬೇಕು ಎಂದು ಸಲಹೆ ಮಾಡಿದರು.

ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಅವರು, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಕೃತಿಗಳು ಪರಸ್ಪರ ತರ್ಜುಮೆ ಆಗಬೇಕು ಎಂದರು.

ಜಿಲ್ಲೆಯಲ್ಲಿ ಕನ್ನಡ, ಕೊಡವ, ತುಳು, ಮಲಯಾಳಂ, ತಮಿಳು  ಭಾಷಿಕರು ಇದ್ದಾರೆ. ತರ್ಜುಮೆಯಿಂದ ಸಂಸ್ಕೃತಿ ಪರಿಚಯವಾಗಲಿದೆ ಎಂದರು. 

ಸಮ್ಮೇಳನಗಳು ಜನರ ನಡುವೆ ಪ್ರೀತಿ, ಸಾಮರಸ್ಯ ಬೆಸೆಯುವ ಸಂಪರ್ಕದ ಕೊಂಡಿ. ಕನ್ನಡದ ತೇರು ಎಳೆಯುವ ಕನ್ನಡಿಗರು ಅನ್ಯ ಭಾಷಿಕರನ್ನೂ ಜೊತೆಯಲ್ಲಿ ಕೊಂಡೊಯ್ಯುವ ಕೆಲಸವಾಗಬೇಕು ಎಂದರು.

ಕಸಾಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಏಕರೂಪದ ಶಿಕ್ಷಣ ಜಾರಿಯಿಂದ ಶಿಕ್ಷಣದಲ್ಲಿರುವ ತಾರತಮ್ಯ ಬದಲಿಸಲು ಸಾಧ್ಯ ಎಂದರು. 

ರಾಜ್ಯ ಹಜ್ ಸಮಿತಿ ಸದಸ್ಯ ಹಾಗೂ ಸಾಹಿತಿ ಅಬೂಬಕರ್ ಸಿದ್ದೀಕ್ ಮೋಂಟುಗೊಳಿ, ಭಾಷೆ ಮತ್ತು ಪುಸ್ತಕಗಳು ಮನುಷ್ಯರ ಬಾಂಧವ್ಯ ವೃದ್ಧಿಸಲಿವೆ. ಕನ್ನಡ ಭಾಷೆಯಲ್ಲಿ ಹೆಚ್ಚಿನ ಪುಸ್ತಕಗಳು ಪ್ರಕಟವಾಗಬೇಕು. ಪುಸ್ತಕ ಕೊಂಡು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿದ ಮಾಜಿ ಸಚಿವ ಬಿ.ಎ.ಜೀವಿಜಯ, ಕೊಡಗು ಸಾಹಿತ್ಯ ಕೃಷಿಯ ತವರೂರು. ಪುಟ್ಟ ಜಿಲ್ಲೆಯಾದರೂ ಸಾಹಿತ್ಯ ಕೃಷಿ ಉತ್ತಮವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ. ಜವರಪ್ಪ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಬೆಸೂರು ಮೋಹನ್ ಪಾಳೇಗಾರ್, ತಾ.ಪಂ ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಚೌಡ್ಲು ಗ್ರಾ.ಪಂ ಅಧ್ಯಕ್ಷೆ ವನಜಾ, ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ಸಿ. ರಾಜಶೇಖರ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಬರಹಗಾರರಾದ ಶಿವದೇವಿ ಅವನೀಶ್ಚಂದ್ರ,  ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಮಧೋಶ್ ಪೂವಯ್ಯ, ವಿವಿಧ ಹೋಬಳಿ ಘಟಕಗಳ ಅಧ್ಯಕ್ಷರು, ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ದ್ವಾರಗಳ ಉದ್ಘಾಟನೆ
ಸೋಮವಾರಪೇಟೆ: ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರದ ಬಾಣಾವಾರ ರಸ್ತೆಯಲ್ಲಿ ನಿರ್ಮಿಸಿದ್ದ ದಿ.ಎಚ್‌.ಡಿ.ಗುರುಲಿಂಗಪ್ಪ ನೆನಪಿನ ದ್ವಾರವನ್ನು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಉದ್ಘಾಟಿಸಿದರು.

ಶನಿವಾರಸಂತೆ ಮಾರ್ಗದಲ್ಲಿ ನಿರ್ಮಿಸಿದ್ದ ದಿ. ಸುಮನ್ ಶೇಖರ್‌ ನೆನಪಿನ ದ್ವಾರವನ್ನು ತಾ.ಪಂ ಸದಸ್ಯೆ ತಂಗಮ್ಮ ಉದ್ಘಾಟಿಸಿದರು.

ವಿವೇಕಾನಂದ ವೃತ್ತದ ಬಳಿ ನಿರ್ಮಿಸಿದ್ದ ದಿವಂಗತ ಎಂ.ಆರ್. ಅಶೋಕ್‌ ಕುಮಾರ್ ನೆನಪಿನ ದ್ವಾರವನ್ನು ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಉದ್ಘಾಟಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಮಲ್ಲೇಗೌಡ ದ್ವಾರವನ್ನು ಜಿ.ಪಂ.ಸದಸ್ಯೆ ಸರೋಜಮ್ಮ ಉದ್ಘಾಟಿಸಿದರು.

ದಿವಂಗತ ಡಿ.ಸಿ. ಜಯರಾಂ ನೆನಪಿನ ದ್ವಾರವನ್ನು ಉದ್ಯಮಿ ಅರುಣ್ ಉದ್ಘಾಟಿಸಿದರು.

ಸಮ್ಮೇಳನದ ಸಭಾಂಗಣದ ಬಳಿ ಪತ್ರಕರ್ತ ದಿ. ಸಿ.ಎನ್. ಸುನೀಲ್‌ ಕುಮಾರ್ ಹೆಸರಿನ ಪುಸ್ತಕ ಮಳಿಗೆಯನ್ನು ಬರಹಗಾರ್ತಿ ಜಲಾ ಕಾಳಪ್ಪ ಉದ್ಘಾಟಿಸಿದರು.

ಕರುಳ ಭಾಷೆಯಲ್ಲಿ ಶಿಕ್ಷಣ ನೀಡಿ– ಸಮ್ಮೇಳನ ಅಧ್ಯಕ್ಷ

ಸೋಮವಾರಪೇಟೆ: ಪ್ರಾಥಮಿಕ ಹಂತದಂದಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದರಿಂದ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂದು ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಮಲ್ಲೋರಹಟ್ಟಿ ಅಭಿಪ್ರಾಯಪಟ್ಟರು.

ಸೋಮವಾರ ಇಲ್ಲಿ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ‘ಕನ್ನಡ ಮಾತೃಭಾಷೆ ಮಾತ್ರವಲ್ಲ. ಕರುಳ ಭಾಷೆ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಮಾತೃಭಾಷೆಯಲ್ಲೇ ನೀಡಬೇಕು’ ಎಂದು ಪ್ರತಿಪಾದಿಸಿದರು.

ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವ ಮೂಲಕ ಪ್ರತಿ ಮಗುವಿನಲ್ಲೂ ಚಿಂತನಶೀಲತೆ ಬೆಳೆಸಬೇಕು. ಇದರಿಂದ ಮಾನಸಿಕ ವಿಕಾಸ, ಆಲೋಚನಾ ಶಕ್ತಿ ಹೆಚ್ಚಲಿದೆ. ಆದರೆ, ಕೆಲ ಪೋಷಕರೇ ಮಕ್ಕಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಬೆಳೆಯಲು ಕಾರಣರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಜಿಲ್ಲೆಯಲ್ಲಿ ಬರಹಗಾರರು ಹೆಚ್ಚಿದ್ದಾರೆ. ಬರೆದದ್ದನ್ನು ಪ್ರಕಟಿಸಲಾಗದೆ ಇಟ್ಟುಕೊಂಡಿದ್ದಾರೆ. ಸರ್ಕಾರ, ಮಾಧ್ಯಮ ಪುಸ್ತಕ ಪ್ರಕಟಣೆಗೆ ಸಹಕಾರ ಕೊಡಬೇಕು ಎಂದು ಸಲಹೆ ಮಾಡಿದರು.

ಸಾಹಿತ್ಯ ಸಮ್ಮೇಳನ ಆಯೋಜನೆಯ ಮೂಲಕ ಹಿರಿಯ, ಕಿರಿಯ ಸಾಹಿತಿಗಳಿಗ ಉತ್ತೇಜನ ನೀಡುವ ಕೆಲಸ ಪರಿಷತ್ತಿನಿಂದ ಆಗಬೇಕು ಎಂದು ಹೇಳಿದರು.

ಅಧ್ಯಕ್ಷರ ಮೆರವಣಿಗೆ ಸ್ತಬ್ಧ ಚಿತ್ರಗಳ ಮೆರಗು

ಸೋಮವಾರಪೇಟೆ: ತಾಲ್ಲೂಕಿನ ಐದನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಕಂಜರ ಬಾರಿಸಿ, ಕನ್ನಡ ಧ್ವಜವನ್ನು ಅಧ್ಯಕ್ಷರಿಗೆ ನೀಡುವ ಮೂಲಕ ಚಾಲನೆ ನೀಡಿದರು.

ಕಳಸಹೊತ್ತ ಮಹಿಳೆಯರು, ಮಂಗಳವಾದ್ಯ, ಸ್ತಬ್ಧಚಿತ್ರಗಳು, ಕೆದಮುಳ್ಳೂರು ಗ್ರಾಮದ ಶ್ರೀದೇವಿ ಮಂಡಳಿಯವರ ತೆಯ್ಯಂ ಕುಣಿತ, ಗೊಂಬೆ ಕುಣಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಡೊಳ್ಳುಕುಣಿತ, ವೀರಗಾಸೆ, ಕೊಡಗಿನ ವಾಲಗ, ಸುಗ್ಗಿ ಕುಣಿತ, ಉರುಟಿಕೊಟ್ಟ್ಆಟ್, ವೀರಭದ್ರ ಕುಣಿತ, ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.

ವೃತ್ತ ನಿರೀಕ್ಷಕ ಪರಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಗ್ರಾಮಾಭಿವೃದ್ಧಿ ಸಹಾಯಕ ನಿರ್ದೇಶಕ ಡಿ.ಬಿ.ಸುನಿಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯಶೋದಾ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಹಿಂದುಳಿದ ವರ್ಗಗಳ ತಾಲೂಕು ವಿಸ್ತರಣಾಧಿಕಾರಿ ಸ್ವಾಮಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೈ ಪ್ರಕಾಶ್ ಇದ್ದರು.

ಅಂಬೇಡ್ಕರ್ ವೃತ್ತದಿಂದ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಮಲ್ಲೋರಹಟ್ಟಿ ಅವರನ್ನು ತೆರೆದ ಜೀಪಿನಲ್ಲಿ ಪ್ರಮುಖ ಬೀದಿಗಳಲ್ಲಿ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.