ADVERTISEMENT

ಸಾರ್ವಜನಿಕರಿಂದ ಪ್ರತಿಭಟನೆ, ಬಂದ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 6:30 IST
Last Updated 4 ಫೆಬ್ರುವರಿ 2011, 6:30 IST

ಸೋಮವಾರಪೇಟೆ/ಮಡಿಕೇರಿ: ಇಲ್ಲಿನ ಮಾನಸ ಹಾಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭೋಜನ ಸ್ವೀಕರಿಸಿದ ನಂತರ ಅಸ್ವಸ್ಥ ರಾಗಿದ್ದವರ ಪೈಕಿ ಗುರುವಾರ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದರಿಂದ ಉದ್ರಿಕ್ತರಾದ ಸಾರ್ವಜನಿಕರು ಪಟ್ಟಣದಲ್ಲಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿಸಿ ಪ್ರತಿಭಟನೆ ನಡೆಸಿದ್ದಲ್ಲದೆ, ಮೃತಪಟ್ಟ ವ್ಯಕ್ತಿ ಹಾಗೂ ಅಸ್ವಸ್ಥರಾದವರಿಗೆ ಮಾಲೀಕರಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದರು.

ಇಲ್ಲಿಗೆ ಸಮೀಪದ ಕಾನ್ವೆಂಟ್ ಬಾಣೆ ನಿವಾಸಿ ಕೃಷ್ಣಪ್ಪ (45) ಎಂಬುವರೇ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.ಮೃತರಾದ ಕೃಷ್ಣಪ್ಪನ ಮೃತದೇಹವನ್ನು ಸೋಮವಾರಪೇಟೆಗೆ ತಂದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಕ್ರೋಶಗೊಂಡು ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಜಮಾಯಿಸಿದರು. ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಯಾರು ಕೂಡ ಧನಸಹಾಯ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾದರು.

ಅಲ್ಲದೆ, ಕಲ್ಯಾಣ ಮಂಟಪದ ಮಾಲೀಕರು ಕೂಡ ಇದುವರೆಗೆ ರೋಗಿಗಳಿಗೆ ನಯಾ ಪೈಸೆ ನೀಡಿಲ್ಲ. ಕೂಡಲೇ ಅವರನ್ನು ಬಂಧಿಸಬೇಕು. ಶುಚಿತ್ವದ ಬಗ್ಗೆ ಗಮನಹರಿಸದೆ ಮುಗ್ಧರ ಸಾವಿಗೆ ಕಾರಣವಾದ ಪಟ್ಟಣ ಪಂಚಾಯಿತಿ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಒಂದು ಗಂಟೆ ಕಾಲ ನಗರ ಬಂದ್ ನಡೆಸಿದರು.ಈ ಮಧ್ಯೆ, ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತ ಮಾನಸ ಹಾಲ್‌ನ ಮಾಲೀಕರು ಮೃತರಿಗೆ 2 ಲಕ್ಷ ರೂಪಾಯಿ ಹಾಗೂ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತಲಾ ಮೂರು ಸಾವಿರ ಪರಿಹಾರ ಧನ ನೀಡುವುದಾಗಿ ದೂರವಾಣಿ ಮೂಲಕ ಡಿವೈಎಸ್‌ಪಿ ಜಯಪ್ರಕಾಶ್ ಅವರಿಗೆ ತಿಳಿಸಿದರು. ಅದಕ್ಕೂ ತೃಪ್ತರಾಗದ ಪ್ರತಿಭಟನಾಕಾರರು, ಮೃತರಿಗೆ 5 ಲಕ್ಷ ರೂಪಾಯಿ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.

ಆನಂತರ ಡಿವೈಎಸ್‌ಪಿ, ಜಿಲ್ಲಾಡಳಿತ ದಿಂದಲೂ ಪರಿಹಾರ ಸಿಗಲಿದೆ ಎಂದು ಹೇಳಿ ಪ್ರತಿಭಟನಾಕಾರರ ಮನವೊಲಿಸಿದರು. ಇದರಿಂದ ಪ್ರತಿಭಟನಾಕಾರರು ಶವಾಗಾರ ದಿಂದ ಮೃತದೇಹವನ್ನು ಕೊಂಡೊಯ್ಯಲು ಅವಕಾಶ ನೀಡಿದರು.55 ಜನ ಜಿಲ್ಲಾಸ್ಪತ್ರೆಗೆ ದಾಖಲು: ಈ ಮಧ್ಯೆ, ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳೆದ ರಾತ್ರಿ 7.30ರಿಂದ 55 ಮಂದಿ ಅಸ್ವಸ್ಥರಾದ ರೋಗಿಗಳು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಪೈಕಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದ್ದು, ಇನ್ನುಳಿದ 54 ಮಂದಿ ಗುಣಮುಖರಾಗುತ್ತಿದ್ದಾರೆ. ರೋಗಿಗಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.


ಅತ್ತ, ವಿರಾಜಪೇಟೆಯಲ್ಲಿಯೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.ಅಸ್ವಸ್ಥರಾದವರ ಪೈಕಿ ಗಣೇಶ್ (31) ಹಾಗೂ ಪುರುಷು (28) ಎಂಬುವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿಡಲಾಗಿದೆ. ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಸ್.ಮಹೇಶ್ (26) ಅವರನ್ನು ಕೂಡ ವಿಶೇಷ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು ಬುಧವಾರ ಮನೆಗೆ ತೆರಳಿ ಪ್ರತಿದಿನ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಕೆ.ಆರ್. ಮುರಳೀಧರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT