ADVERTISEMENT

ಸೀಮೆಎಣ್ಣೆ, ನೀರು ಪೂರೈಸಲು ಆಗ್ರಹ

ನಾಪೋಕ್ಲು ಗ್ರಾಮ ಪಂಚಾಯಿತಿ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 9:05 IST
Last Updated 18 ಜುಲೈ 2013, 9:05 IST

ನಾಪೋಕ್ಲು: ಇಲ್ಲಿನ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಬುಧವಾರ ನಡೆದ ನಾಪೋಕ್ಲು ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ಹಲವು ಆರೋಪ, ಪ್ರತ್ಯಾರೋಪಗಳು ಕೇಳಿಬಂದವು.

ಕೃಷಿ, ತೋಟಗಾರಿಕೆ, ಕಂದಾಯ, ಸೆಸ್ಕ್, ಲೋಕೋಪಯೋಗಿ, ಶಿಕ್ಷಣ, ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು.

ಈ ವಿವರಣೆಗಳಿಗೆ ಗ್ರಾಮಸ್ಥರಾದ ಕಲಿಯಂಡ ಶಂಭು ಮಾದಪ್ಪ, ಹ್ಯಾರಿ ಮಂದಣ್ಣ, ತಿಮ್ಮಯ್ಯ, ಡಾ. ಸಣ್ಣುವಂಡ ಕಾವೇರಪ್ಪ, ಎಚ್.ಕೆ.ಬೊಳ್ಳು, ಕೊಂಡ್ಯೋಳಂಡ ಮೇದಪ್ಪ, ಕಲ್ಯಾಟಂಡ ರಮೇಶ್, ಕೆಲೇಟಿರ ಅಪ್ಪಚ್ಚು, ಸಾಬು ನಾಣಯ್ಯ, ಬಾಳೆಯಡ ಮೇದಪ್ಪ, ಕಂಗಾಂಡ ಜಾಲಿ ಪೂವಪ್ಪ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು.

ಚೆರಿಯಪರಂಬುವಿನ ಕಾವೇರಿ ನದಿ ತೀರದಲ್ಲಿ ನಿರ್ಮಿಸಿರುವ ಅಕ್ರಮ ಗುಡಿಸಲುಗಳ ಬಗ್ಗೆ ಸದಸ್ಯರ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಅಕ್ರಮ ಒತ್ತುವರಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಮಾತನಾಡಿ ಈ ಜಾಗವು ವಾಸಕ್ಕೆ ಯೋಗ್ಯವಲ್ಲ ಎಂದು ಈಗಾಗಲೇ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಈ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ ಎಂದರು. ಕಲಿಯಂಡ ಹ್ಯಾರಿ ಮಂದಣ್ಣ ಮಾತನಾಡಿ ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘ ಸಂಸ್ಥೆಗಳು ನಾಗರಿಕರು ದೂರು ನೀಡಿದರೂ ಅವರು ಸ್ಪಂದಿಸದಿರುವದು ವಿಷಾದಕರ ಎಂದರು.

ಪಡಿತರ ಸೀಮೆ ಎಣ್ಣೆ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಆಕ್ರೋಶ ಕಂಡು ಬಂತು. ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿಗೆ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ನಾಪೋಕ್ಲು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ನೀಡಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು. ಸರ್ಕಾರಿ ಕಾಲೇಜಿಗೆ ದಾನಿಗಳು ನೀಡಿದ ಜಾಗವನ್ನು ಅತಿಕ್ರಮಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಬೀದಿ ದೀಪ ಹಾಗೂ ಶುಚಿತ್ವದ ಬಗ್ಗೆ ಗಮನಹರಿಸುವಂತೆ ಡಾ.ಸಣ್ಣುವಂಡ ಕಾವೇರಪ್ಪ ಪಂಚಾಯಿತಿ ಅಧ್ಯಕ್ಷರ ಗಮನ ಸೆಳೆದರು.

ಕಲ್ಲುಮೊಟ್ಟೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಮಹಿಳೆಯರು ಆರೋಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ,  ತಾಲ್ಲೂಕು ಪಂಚಾಯಿತಿ ಸದಸ್ಯ ನೆರವಂಡ ಉಮೇಶ್, ನೋಡಲ್ ಅಧಿಕಾರಿ ಶ್ರೀಧರನ್ ಮಾತನಾಡಿದರು. ಗ್ರಾಮ ಪಂಚಾಯಿತಿ ಆಧ್ಯಕ್ಷೆ ಕಲ್ಯಾಟಂಡ ಸುಮಿತ್ರಾ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯೆ ಕಾಂಡಂಡ ಪ್ರತಿಜಾ ಅಚ್ಚಪ್ಪ, ಉಪಾಧ್ಯಕ್ಷ ಟಿ.ಎಚ್.ಅಹಮ್ಮದ್, ಸದಸ್ಯರಾದ ಕುಲ್ಲೆೀಟಿರ ಅರುಣ್ ಬೇಬ, ಕೇಟೋಳಿರ ಹರೀಶ್ ಪೂವಯ್ಯ, ಶಿವಚಾಳಿಯಂಡ ಜಗದೀಶ್, ಮುಂಡಂಡ ಸುಶೀಲಾ ಸೋಮಣ್ಣ, ಟಿ.ಎ. ಮಹಮ್ಮದ್ ಹನೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.