ಮಡಿಕೇರಿ: ಈಚಿನ ದಿನಗಳಲ್ಲಿ ಸೇನೆಗೆ ಸೇರುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಕರಲ್ಲಿ ದೇಶಪ್ರೇಮ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗು ವಂತೆ ಪ್ರೇರೇಪಿಸಬೇಕಾಗಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪುತ್ರ, ಏರ್ ಮಾರ್ಷಲ್(ನಿವೃತ್ತ) ಕೆ.ಸಿ. ಕಾರ್ಯಪ್ಪ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಇವರ ಸಹಯೋಗದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಸಹಕಾರದಲ್ಲಿ ನಗರದ ಕೋಟೆ ಆವರಣದಲ್ಲಿ ಗುರುವಾರ ನಡೆದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 117ನೇ ಜಯಂತಿ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ದೇಶ, ರಾಜ್ಯ ಹಾಗೂ ಕೊಡಗು ಜಿಲ್ಲೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಈಚಿನ ದಿನಗಳಲ್ಲಿ ಕೊಡಗು ಹಲವು ಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆ. ಇಲ್ಲಿನ ಅರಣ್ಯ, ದೇವರಕಾಡು ಸಂರಕ್ಷಣೆ ಮಾಡುವಂತಾಗಬೇಕು. ಕಾವೇರಿ ನದಿ ನೀರು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಬೇಕಿದೆ ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಭ್ರಾತೃತ್ವ ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್ ಮಾತನಾಡಿ, ಕಾರ್ಯಪ್ಪ ಜನ್ಮ ದಿನಾಚರಣೆಯನ್ನು ಶಿಸ್ತಿನ ದಿನಾಚರಣೆಯನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಲಾಗುವುದು ಎಂದರು. ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ಮಿಸಲು ಪ್ರಯತ್ನಿಸ ಲಾಗುತ್ತಿದೆ. ಈ ಸಂಬಂಧ ಸಂಘ ಸಂಸ್ಥೆಗಳು, ಮುಖಂಡರು, ಸಮಾಜದ ಪ್ರತಿನಿಧಿಗಳು ಸಲಹೆ ನೀಡಬಹುದು ಎಂದು ಹೇಳಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ (ನಿವೃತ್ತ) ಕೆ.ಸಿ. ಸುಬ್ಬಯ್ಯ ಮಾತನಾಡಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆವರಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಹೇಳಿದರು.
ಸನ್ಮಾನ: ನಾಪೋಕ್ಲು ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸ್ವಾಗತ ನೃತ್ಯ ಪ್ರದರ್ಶಿಸಿದರು. ನಾಪೋಕ್ಲು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಮ್ಮತ್ತಾಟ್ ಪ್ರದರ್ಶಿಸಿದರು. ಕಕ್ಕಬ್ಬೆಯ ನಾಲಡಿ ಗ್ರಾಮದವರು ಉರುಟ್ಟಿಕೋಟ್ ಆಟ್ ಪ್ರದರ್ಶನ ನೀಡಿದರು. ಕಾಲೂರಿನ ಗ್ರಾಮಸ್ಥರು ಕತ್ತಿಯಾಟ್ ಪ್ರದರ್ಶನ ಮಾಡಿದರು. ಸ್ವರ್ಣ ಪದಕ ವಿಜೇತರು ಹಾಗೂ ರೈಫಲ್ ಶೂಟಿಂಗ್ ಸ್ಪರ್ಧಾಪಟುಗಳಾದ ಕ್ಯಾಪ್ಟನ್ ಎ.ಪಿ. ಸುಬ್ಬಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಜಿಲ್ಲಾ ಎಸ್‌ಪಿ ವರ್ತಿಕಾ ಕಟಿಯಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಾರುಲತಾ ಸೋಮಲ್, ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆಹಸ್ರನ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೂವೇರ ಸುಬ್ಬಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಐ. ಭಾವಿಕಟ್ಟಿ, ಮೊಣ್ಣಂಡ ಶೋಭ ಸುಬ್ಬಯ್ಯ ಮಾದೇಟ್ಟಿರ ಬೆಳ್ಯಪ್ಪ ಇದ್ದರು. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಸ್ಪರ್ಧೆ ವಿಜೇತರು: ಕಾರ್ಯಪ್ಪ ಅವರ ಜನ್ಮದಿನದ ಅಂಗವಾಗಿ ನಡೆಸಿದ ರಾಷ್ಟ್ರಗೀತೆ ಹಾಡುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅರಮೇರಿ ಶಾಲೆ (ಪ್ರಥಮ), ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ (ದ್ವಿತೀಯ), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ತೃತೀಯ), ಪ್ರೌಢ ಶಾಲಾ ವಿಭಾಗದಲ್ಲಿ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ (ಪ್ರಥಮ), ನಗರದ ಸಂತ ಜೋಸೆಫರ ಶಾಲೆ (ದ್ವಿತೀಯ), ಅಮ್ಮತ್ತಿ ಪ್ರೌಢಶಾಲೆ (ತೃತೀಯ), ಕಾಲೇಜು ವಿಭಾಗದಲ್ಲಿ ನಗರದ ಎಫ್.ಎಂ.ಕೆ.ಎಂ.ಸಿ. ಕಾಲೇಜು (ಪ್ರಥಮ), ಮೂರ್ನಾಡು ಪಿ.ಯು. ಕಾಲೇಜು (ದ್ವಿತೀಯ), ಮದೆ ಮಹೇಶ್ವರ ಪಿ.ಯು. ಕಾಲೇಜು (ತೃತೀಯ) ತಂಡಕ್ಕೆ ಬಹುಮಾನ ದೊರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.