ADVERTISEMENT

ಸೋಮವಾರಪೇಟೆ: ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 7:35 IST
Last Updated 1 ಜನವರಿ 2011, 7:35 IST

ಸೋಮವಾರಪೇಟೆ: ತಾಲ್ಲೂಕಿನ 11 ಜಿ.ಪಂ. ಹಾಗೂ 19 ತಾ.ಪಂ. ಕ್ಷೇತ್ರಗಳಿಗೆ ಮತದಾನ ಶುಕ್ರವಾರ ಶಾಂತಿಯುತವಾಗಿ ನಡೆಯಿತು. ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನದವರೆಗೆ ನೀರಸ ಮತದಾನ ನಡೆಯಿತು. ಮಧ್ಯಾಹ್ನ 3 ಗಂಟೆ ನಂತರ ಮತದಾನ ಬಿರುಸುಗೊಂಡಿತು.

ಪ್ರಥಮ ಬಾರಿಗೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿದ್ದರಿಂದ ಅತ್ಯಂತ ವ್ಯವಸ್ಥಿತವಾಗಿ ಮತದಾನ ನಡೆದಿದ್ದು, ಗುಡ್ಡೆಹೊಸೂರು ಹಾಗೂ ಹಾರೆಹೊಸೂರು ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಅರ್ಧ ಗಂಟೆ ಮತದಾನ ವಿಳಂಬವಾಯಿತು.

ಶಾಸಕ ಅಪ್ಪಚ್ಚುರಂಜನ್ ಕುಂಬೂರಿನ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಮತ ಚಲಾಯಿಸಿದರೆ, ಬಿಳಿಗೇರಿಯಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ ಪತ್ನಿ ಸಮೇತ ಮತ ಚಲಾಯಿಸಿದರು. ಪ್ರಮುಖರಾದ ಜಿ.ಪಂ. ಅಧ್ಯಕ್ಷ ವಿ.ಎಂ.ವಿಜಯ, ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಎಚ್.ಬಿ. ಜಯಮ್ಮ, ಸದಸ್ಯರಾದ ಸಂಜಯ್ ಜೀವಿಜಯ, ಲೋಕೇಶ್ವರಿ ಗೋಪಾಲ್, ವಿ.ಪಿ.ಶಶಿಧರ್ ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಮತದಾನ ಮಾಡಿದರು.

ಅತ್ತೂರು-ನಲ್ಲೂರು ಮತಗಟ್ಟೆಯಲ್ಲಿ ಶೂನ್ಯ ಮತದಾನವಾಗಿದೆ. ಅತ್ತೂರಿನಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಎಚ್.ಅಶ್ವತ್ಥನಾರಾಯಣಗೌಡ ಹಾಗೂ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಮಂಜುನಾಥ ಕೆ.ಅಣ್ಣಿಗೇರಿ ಭೇಟಿ ನೀಡಿ ಗ್ರಾಮಸ್ಥರ ಮನ ವೊಲಿಕೆಗೆ ಮುಂದಾದರೂ ಪ್ರಯೋ ಜನವಾಗಲಿಲ್ಲ. ಶಾಂತಳ್ಳಿ ಜಿ.ಪಂ. ಕ್ಷೇತ್ರದ ಬಸವನಕಟ್ಟೆ ಗ್ರಾಮಸ್ಥರು ಕೂಡ ಮತದಾನ ಬಹಿಷ್ಕರಿಸಿದರು.

ಗೋಪಾಲಪುರ ಜಿ.ಪಂ. ವ್ಯಾಪ್ತಿಯ ಹಾರೆಹೊಸೂರು ಮತಗಟ್ಟೆಯೊಂದರಲ್ಲಿ ಗೌರಮ್ಮ ಸಿದ್ದಯ್ಯ ಎಂಬುವರ ಮತವನ್ನು ಯಾರೋ ಚಲಾಯಿಸಿ ಹೋಗಿದ್ದ ಕಾರಣ 11 ಗಂಟೆಗೆ ಮತ ಗಟ್ಟೆಗೆ ಬಂದ ಗೌರಮ್ಮ ಮತದಾನ ಮಾಡಲಾಗದೆ ಹಿಂತಿರುಗಿದರು.

ಇದೇ ಮತಗಟ್ಟೆಯ ಸಮೀಪ ಮತದಾರ ರೊಬ್ಬರಿಗೆ ಹಣದ ಆಮಿಷಯೊಡ್ಡಿ ರೂ. 100ರ ನೋಟನ್ನು ನೀಡುತ್ತಿರು ವುದು ಕಂಡು ಬಂದಿತು. ಮಾಲಂಬಿ ಮತಗಟ್ಟೆಯಲ್ಲಿ ಮತದಾನ ಮಾಡ ಬೇಕಿದ್ದ, ಗಿರಿಜನರ ರಾಣಿ ಮುತ್ತಪ್ಪ ಎಂಬುವರ ಚುನಾವಣಾ ಗುರುತಿನ ಚೀಟಿಯನ್ನು ಪಕ್ಷವೊಂದರ ಪ್ರಮುಖ ರೊಬ್ಬರು ಹಿಂದಿನ ದಿನವೇ ಕಿತ್ತು ಕೊಂಡ ಪರಿಣಾಮ ಮತದಾನದಿಂದ ವಂಚಿತರಾಗಬೇಕಾಯಿತು.

ಗುಡ್ಡೆಹೊಸೂರು ಶಾಲೆಯ ಮತಗಟ್ಟೆಯಲ್ಲಿ ಈರಯ್ಯ (95) ಹಾಗೂ ಲಕ್ಷ್ಮಿ (85) ಸಹಾಯಕರೊಂದಿಗೆ ಮತ ಚಲಾಯಿಸಿದರು. ಕೂಡಿಗೆ ಸಮೀಪ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರು ಕಂಠಪೂರ್ತಿ ಕುಡಿದು ಬಿದ್ದು, ಮತದಾನ ಮಾಡದಂತಹ ಸ್ಥಿತಿಯಲ್ಲಿ ಕಂಡು ಬಂದರು.

ಹೆಬ್ಬಾ ಲೆಯ ಮೂರು ಮತಗಟ್ಟೆ ಯಲ್ಲಿ 3 ಸಾವಿರದಷ್ಟು ಮತದಾರ ರಿದ್ದರೂ ಯಾವ ಮತಗಟ್ಟೆಯಲ್ಲೂ ಮತದಾರರ ಸಾಲು ಕಂಡು ಬರದೇ ಇರುವುದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.