ADVERTISEMENT

ಸೋರುವ ವೈದ್ಯರ ವಸತಿ ಗೃಹ: ಆತಂಕ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 5:50 IST
Last Updated 25 ಫೆಬ್ರುವರಿ 2012, 5:50 IST

ಶನಿವಾರಸಂತೆ: ವೈದ್ಯರ ವಸತಿಗೃಹ ಮಳೆಗಾಲದಲ್ಲಿ ಸೋರುವುದರಿಂದ ಇಲ್ಲಿಗೆ ಬರುವ ವೈದ್ಯರು ಬೇಗನೇ ಇಲ್ಲಿಂದ ಜಾಗ ಖಾಲಿ ಮಾಡಲು ಕಾರಣವಾಗಿದೆ ಎಂದು ನೂತನ ವೈದ್ಯಾಧಿಕಾರಿ ಮಹದೇವಯ್ಯ ಆತಂಕ ವ್ಯಕ್ತಪಡಿಸಿದರು.

ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಚೆಗೆ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ ಕೇಂದ್ರಕ್ಕೆ ಅಗತ್ಯವಿರುವ ಔಷಧ ಮತ್ತು ಹುಚ್ಚುನಾಯಿ ಕಡಿತಕ್ಕೆ ಬೇಕಾದ ಇಂಜೆಕ್ಷನ್‌ಗಳನ್ನು ತುರ್ತಾಗಿ ತರಿಸಬೇಕು. ಆರೋಗ್ಯ ಕೇಂದ್ರದ ಮುಂಭಾಗದ ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ವೈದ್ಯಾಧಿಕಾರಿ ಚೇತನ್ ಮಾತನಾಡಿ, ರಕ್ಷಾ ಸಮಿತಿಯಲ್ಲಿ 2,29,274 ರೂಪಾಯಿ ಇದ್ದು, ಅದರಲ್ಲಿ ತುರ್ತಾಗಿ ಅಗತ್ಯವಿರುವ ಔಷಧಿ ಹಾಗೂ ದುರಸ್ತಿ ಕಾರ್ಯಗಳನ್ನು ಮಾಡಿಸುವಂತೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎ.ಕೆ.ಲೋಕೇಶ್‌ಕುಮಾರ್ ಆಸ್ಪತ್ರೆಗಳಲ್ಲಿ ಔಷಧಿ ಇಲ್ಲವಾದರೆ ಸ್ಥಳೀಯ ಖಾಸಗಿ ಔಷಧ ಅಂಗಡಿಗಳಿಂದ ಕೊಟೇಶನ್ ಪಡೆದು ಔಷಧ ತರಿಸಿಕೊಳ್ಳಬೇಕು ಎಂದು ಸೂಚಿಸಿದರು.
 
ವೈದ್ಯರ ವಸತಿಗೃಹವನ್ನು ದುರಸ್ತಿಗೊಳಿಸಲು ಹಾಗೂ ಆರೋಗ್ಯ ಕೇಂದ್ರದ ಅಡ್ಡರಸ್ತೆಗೆ ಡಾಂಬರೀಕರಣ ಮಾಡಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು ಸೌಜನ್ಯದಿಂದ ವರ್ತಿಸಿದರೆ ಆ ರೋಗಿಗಳ ಅರ್ಧ ರೋಗ ವಾಸಿಯಾದಂತೆ ಎಂದು ಲೋಕೇಶ್‌ಕುಮಾರ್ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಮಾತನಾಡಿದರು. ದಂತವೈದ್ಯ ನಾಗೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಬಲರಾಂ, ಸಮಾಜ ಕಲ್ಯಾಣಾಧಿಕಾರಿ ನರಸಿಂಹಮೂರ್ತಿ, ಸಂಪನ್ಮೂಲ ವ್ಯಕ್ತಿ ಡಿ.ಎಲ್.ಮೂರ್ತಿ, ಸುದ್ದಿ ಪ್ರತಿನಿಧಿ ಎಸ್.ಜಿ.ನರೇಶ್ಚಂದ್ರ, ದಾದಿಯರಾದ ವಿಮಲಾ, ಆರತಿ, ಇತರರು ಹಾಜರಿದ್ದರು. ಡಾ.ಚೇತನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.