ADVERTISEMENT

ಹಾಡಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ: ರವಿ ಕುಶಾಲಪ್ಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 5:40 IST
Last Updated 17 ಜನವರಿ 2012, 5:40 IST
ಹಾಡಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ: ರವಿ ಕುಶಾಲಪ್ಪ
ಹಾಡಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ: ರವಿ ಕುಶಾಲಪ್ಪ   

ಸಿದ್ದಾಪುರ: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಅರಣ್ಯದಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ರಾಜೀವ್‌ಗಾಂಧಿ ವಿದ್ಯುತ್ ಯೋಜನೆಯಡಿ ತಕ್ಷಣವೇ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ ಸೂಚಿಸಿದರು. 

ಮಾಲ್ದಾರೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಹಾಡಿಯಲ್ಲಿ ವಾಸ ಮಾಡುತ್ತಿರುವ ಗಿರಿಜನರಿಗೆ ರಾಜೀವ್‌ಗಾಂಧಿ ವಿದ್ಯುತ್ ಯೋಜನೆಯಡಿ ಸಂಪರ್ಕ ಒದಗಿಸಲು ಆದೇಶವಿದ್ದರೂ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಅಹವಾಲು ತೋಡಿಕೊಂಡ ಹಿನ್ನೆಲೆಯಲ್ಲಿ ರವಿ ಕುಶಾಲಪ್ಪ ಆದೇಶಿಸಿದರು. 

 ಈ ಹಿಂದೆ ಅರಣ್ಯ ಸಚಿವರು, ಸಂಸದರು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಸೂಚಿಸಿದ್ದರೂ ನಮಗೆ ವಿದ್ಯುತ್ ಭಾಗ್ಯ ಒದಗಲಿಲ್ಲ ಎಂದು ಹಾಡಿಯ ನಿವಾಸಿಗಳು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಹಾಜರಿದ್ದ ಸೆಸ್ಕ್ ಎಂಜಿನಿಯರ್ ವಿಜಯ್‌ಕುಮಾರ್ ಮಾತನಾಡಿ ನಿವಾಸಿಗಳಿಗೆ ಈ ಹಿಂದೆಯೇ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆ ಮುಂದಾಗಿತ್ತು. ಆದರೆ ಅರಣ್ಯ ಇಲಾಖೆಯ ವಿಘ್ನವೇ ಯೋಜನೆ ವಿಳಂಬವಾಗಲು ಕಾರಣವಾಗಿದೆ ಎಂದು ತಿಳಿಸಿದರು.

ಜ.25ರಿಂದ ಹಾಡಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಸಭೆಯಲ್ಲಿ ನಿರ್ಣಯಿಸಿದ್ದು, ಮೊದಲ ಹಂತವಾಗಿ ಮಾಲ್ದಾರೆ ಅರಣ್ಯ ವ್ಯಾಪ್ತಿಯ ಅಂಚೆ ತಿಟ್ಟು, ಗೇಟ್ ಹಾಡಿ,  ಅಸ್ಥಾನ ಗಿರಿಜನ ಹಾಡಿಯ ಸುಮಾರು 162 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಯಿತು. ಇನ್ನುಳಿದ ಹಾಡಿಗಳಿಗೆ ಹಂತ ಹಂತವಾಗಿ ಸಂಪರ್ಕ ಕಲ್ಪಿಸಲಾಗುವುದು ಎಂದು ಎಂಜಿನಿಯರ್ ತಿಳಿಸಿದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲೆದೋರಿರುವ ಆನೆ ಹಾವಳಿಯ ಬಗ್ಗೆ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ ಕಾಫಿ ಬೆಳೆಗಾರರು, ಪ್ರತಿ ವರ್ಷ ಐದಾರು ಕಾರ್ಮಿಕರು ಆನೆ ದಾಳಿಗೆ ತುತ್ತಾಗುತ್ತಿದ್ದಾರೆ ಆನೆ ದಾಳಿಯಿಂದ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪರಿಹಾರ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ.
ಕೂಡಲೇ ಕಂದಕ ನಿರ್ಮಾಣ ಮಾಡಿ ಸೋಲಾರ್ ವಿದ್ಯುತ್ ಬೇಲಿ ದುರಸ್ತಿ ಮಾಡಬೇಕು ಎಂದು ಕಾಫಿ ಬೆಳೆಗಾರ ನಂದ ಸುಬ್ಬಯ್ಯ ಆಗ್ರಹಿಸಿದರು.

ತಾ.ಪಂ ಸದಸ್ಯ ಪಿ.ವಿ.ಜಾನ್ಸನ್ ಕಾಡಾನೆ ದಾಳಿಯಿಂದ ಗಾಯಗೊಂಡವರಿಗೆ ಕೇವಲ ಚಿಕಿತ್ಸೆ ವೆಚ್ಚವನ್ನು ಮಾತ್ರ ನೀಡುವುದರಿಂದ ಏನೂ ಪ್ರಯೋಜನವಿಲ್ಲ. ಆತ ಕೂಲಿ ಮಾಡಲಾಗದೇ ಅಂಗವಿಕಲನಾಗಿ ಉಳಿಯುವಂತಾಗಿದೆ. ಇವರಿಗೆ ಪರಿಹಾರ ಕೂಡ ಕಡಿಮೆ. ಕಾಡಾನೆ ದಾಳಿಗೆ ತುತ್ತಾದವರಿಗೆ ಒಂದು ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ `ಉದ್ಯೋಗ ಖಾತ್ರಿ ಯೋಜನೆ ಯಾವುದೇ ಕಾರಣಕ್ಕೂ ಕಳಪೆಯಾಗಬಾರದು. ಕಳಪೆಯಾಗದಂತೆ ನೋಡಿಕೊಳ್ಳುವುದು ಗ್ರಾಮಸ್ಥರ ಜವಾಬ್ದಾರಿ. ಗ್ರಾಮಸ್ಥರ             ನಿರ್ಲಕ್ಷ್ಯವೇ ಕಾಮಗಾರಿ ಕಳಪೆಯಾಗಲು~ ಕಾರಣ ಎಂದರು. 

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್ಚು  ಭಾಗ ಅರಣ್ಯದಿಂದ ಸುತ್ತುವರೆದಿದ್ದು, ಕಾಡು ಪ್ರಾಣಿಗಳ ದಾಳಿಯಿಂದ ಗ್ರಾಮಸ್ಥರನ್ನು ರಕ್ಷಿಸಲು ಸೋಲಾರ್ ಬೇಲಿ ಹಾಗೂ ಕಂದಕ ನಿರ್ಮಿಸುವ ಕೆಲಸ ಶೀಘ್ರವಾಗಿ ಪ್ರಾರಂಭವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

 ಅರಣ್ಯದೊಳಗೆ ಕಾಡಾನೆಗಳು ಅಹಾರ ಹಾಗೂ ನೀರಿನ   ಕೊರತೆಯಿಂದ ಬಳಲುತ್ತಿರುವುದೇ ನಾಡಿಗೆ ಪ್ರವೇಶಿಸಲು ಕಾರಣ ಎಂದ ಕಾಫಿ ಬೆಳೆಗಾರ ಮಿಟ್ಟು ನಂಜಪ್ಪ ಈಗಾಗಲೇ ಅರಣ್ಯದೊಳಗೆ ಮತ್ತು ಅರಣ್ಯದಂಚಿನಲ್ಲಿ ಬಿದಿರು ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು. 

   ಸಭೆಯಲ್ಲಿ ಜಿ.ಪಂ. ಸದಸ್ಯೆ ಧನ್ಯರತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೆಚ್.ಕೆ.ದಿನೇಶ್, ಗ್ರಾ.ಪಂ ಅಧ್ಯಕ್ಷ ಸಜೀ ಥೋಮಸ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.