ADVERTISEMENT

ಹಾಡಿ, ಕುಣಿದ ಪುಟಾಣಿಗಳು; ಮನ ಗೆದ್ದ ಬುದ್ಧಿಮಾಂದ್ಯ ಮಕ್ಕಳು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:17 IST
Last Updated 4 ಡಿಸೆಂಬರ್ 2012, 8:17 IST

ಕುಶಾಲನಗರ: ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಸೋಮವಾರ ಕುಶಾಲನಗರ ಫಾತಿಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ  ಸಾಂಸ್ಕೃತಿಕ ಸ್ಪರ್ಧೆಗಳು ಗಮನ ಸೆಳೆದವು.

1 ರಿಂದ 4 ಮತ್ತು 5 ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ನಡೆದ ಸ್ಪರ್ಧೆಯಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಂಡಿತು. ಮಕ್ಕಳು ಛದ್ಮವೇಷ ಸ್ಪರ್ಧೆ, ಕಂಠಪಾಠ, ಚಿತ್ರಕಲೆ, ಕಥೆ ಹೇಳುವುದು, ಧಾರ್ಮಿಕ ಪಠಣ, ಜನಪದ ನೃತ್ಯ, ದೇಶಭಕ್ತಿಗೀತೆ, ಅಭಿನಯ ಗೀತೆ ಸ್ಪರ್ಧೆ ಮತ್ತಿತರ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಮೆರೆದರು.

ಮಸಗೋಡು ಸರ್ಕಾರಿ ಶಾಲೆಯ ಬಿ.ಸಿ.ಕಿಶನ್ ಅವರ ಮತ್ಸ್ಯ ಕನ್ಯೆ ವೇಷ, ಸೋಮವಾರಪೇಟೆ ಒಎಲ್‌ವಿ ಕಾನ್ವೆಂಟಿನ  ಶ್ರೇಯಸ್ ಪ್ರದರ್ಶಿಸಿದ ಉಗ್ರನರಸಿಂಹ ಮತ್ತು ಲಕ್ಷ್ಮಿ ವೇಷಧಾರಿ ಗಮನ ಸೆಳೆದವು.

ಚೌಡ್ಲು ಸಾಂದೀಪಿನಿ ಶಾಲೆಯ ಸುದನ್ವ ಕಾಳಿಂಗ ಸರ್ಪ, ಕೂಡಿಗೆ ಸರ್ಕಾರಿ ಶಾಲೆಯ ಪೂಜಾ ಶಕುಂತಲಾ ಪಾತ್ರದಲ್ಲಿ, ಯಶಿಕಾ ಅಜ್ಜಿ ಪಾತ್ರದಲ್ಲಿ, ಹೆಬ್ಬಾಲೆ ಸಿಕ್ರೇಟ್ ಹಾರ್ಟ್ ಶಾಲೆಯ ಹರ್ಷಿತಾ ಚಾಮುಂಡೇಶ್ವರಿ ವೇಷದಲ್ಲಿ, ಕೂತಿ ಶಾಲೆಯ ಕೆ.ಎ.ಭೂಮಿಕಾ ಸರಸ್ವತಿ ವೇಷದಲ್ಲಿ ಹಾಗೂ ಗೌಡಳ್ಳಿ ಸರ್ಕಾರಿ ಶಾಲೆಯ ದೀಕ್ಷಿತ್ ಪ್ರದರ್ಶಿಸಿದ ಯಕ್ಷಗಾನ ದೃಶ್ಯ ಗಮನ ಸೆಳೆಯಿತು.

ಕ್ರಿಯಾಶೀಲತೆಗೆ ದಾರಿ: ಬಿಇಒ
ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರರಾಜೇ ಅರಸ್, ಪ್ರತಿಭಾ ಕಾರಂಜಿ ಸ್ಪರ್ಧೆಯು ಮಕ್ಕಳ ಸೃಜನಶೀಲತೆ, ಕ್ರಿಯಾಶೀಲತೆಯನ್ನು ಬೆಳೆಸಲು ನೆರವಾಗಿದೆ ಎಂದರು.

ಚೌಡ್ಲು ಒಎಲ್‌ವಿ ಶಾಲೆಯ ನಂದಿನಿ, ಸಬೀಹ, ನಿಶಾ, ಜುಬೇರಿಯಾ ಸ್ಪರ್ಧೆಗೆ ಚಾಲನೆ ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ವಿ. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಶಂಕರನಾರಾಯಣ, ಬಿಆರ್‌ಸಿ ಎಸ್.ಪಿ. ಮಹಾದೇವ್, ಮುಖ್ಯ ಶಿಕ್ಷಕಿ ಫಿಡಿಲಿಯಾ, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಎಸ್.ಎ. ಯೋಗೇಶ್, ಸಿ.ಟಿ. ಸೋಮಶೇಖರ್, ಪೂವಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಫಿಲಿಫ್‌ವಾಸ್, ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ಎಚ್.ಎನ್. ರಮೇಶ್, ಶಿಕ್ಷಣ ಸಂಯೋಜಕರಾದ ಕೆ.ಮೂರ್ತಿ, ಸಿಆರ್‌ಪಿ ಎಚ್.ಟಿ. ವಸಂತ್, ಉಳ್ಳಸೋಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎಸ್. ಶಿವಾನಂದ ಇತರರು ಇದ್ದರು.

ಶಿಕ್ಷಕ ಅಂತೋಣಿ ಪ್ರಭುರಾಜ್ ನಿರ್ವಹಿಸಿದರು. ಶಿಕ್ಷಣ ಸಂಯೋಜಕ ಎಂ.ಪಿ. ವಸಂತ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ರಾಮಚಂದ್ರಮೂರ್ತಿ ವಂದಿಸಿದರು.

ಬುದ್ಧಿಮಾಂದ್ಯ ಮಕ್ಕಳ ಕ್ರೀಡಾಸಕ್ತಿ
ಗೋಣಿಕೊಪ್ಪಲು: ತಾಲ್ಲೂಕಿನ ಪೊನಂಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸೋಮವಾರ  ನಡೆದ ಬುದ್ಧಿಮಾಂದ್ಯ ಮಕ್ಕಳ ಕ್ರೀಡಾಕೂಟದಲ್ಲಿ ಮಕ್ಕಳು ತಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಮಾಡಿದರು. ನೃತ್ಯ, ಕ್ರೀಡೆಯ ಮೂಲಕ ತಮ್ಮಲ್ಲೂ ಪ್ರತಿಭೆ ಇದೆ ಎಂಬುದನ್ನು ತೋರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯತಿ ವತಿಯಿಂದ ನಡೆದ ಕ್ರೀಡಾ ಕೂಟದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಆನಂದಿಸಿದರು. 100 ಮೀಟರ್ ಓಟ, ಬಕೆಟ್‌ನಲ್ಲಿ ಬಾಲ್ ಹಾಕುವುದು, ಮ್ಯೂಸಿಕಲ್ ಚೈರ್ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆಲವು ಮಕ್ಕಳು ಸುಂದರವಾಗಿ ನೃತ್ಯ ಮಾಡಿ ಬೆರಗುಗೊಳಿಸಿದರು. ವಿಜೇತ ಮಕ್ಕಳಿಗೆ ಬಹಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಎಂ.ಕೆ. ಲೀಲಾ, ದೈಹಿಕ ಶಿಕ್ಷಣ ಶಿಕ್ಷಕರಾದ ಧರ್ಮಲಿಂಗಂ, ಎಂ.ಟಿ. ಸತ್ಯ, ಮಾಯಮುಡಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್, ಪೊನ್ನಂಪೇಟೆ ಸಿಆರ್‌ಪಿ ಅಮ್ಮತ್ತೀರ ವಾಸುವರ್ಮ ಕ್ರೀಡಾ ಕೂಟ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.