ADVERTISEMENT

`ಹಾವು ರೈತನ ನಿಜವಾದ ಮಿತ್ರ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 9:34 IST
Last Updated 6 ಡಿಸೆಂಬರ್ 2012, 9:34 IST

ಗೋಣಿಕೊಪ್ಪಲು: ರೈತನ ಬೆಳೆಗಳನ್ನು ತಿಂದು ಹಾಳು ಮಾಡುತ್ತಿರುವ ಇಲಿಗಳನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಶಕ್ತಿ ಹಾವುಗಳಿಗೆ ಮಾತ್ರ ಇದೆ. ಹಾವುಗಳು ರೈತನ ನಿಜವಾದ ಮಿತ್ರ. ಇದನ್ನು ತಿಳಿದುಕೊಳ್ಳದ ರೈತ ಹಾವುಗಳನ್ನು ಶತ್ರುಗಳಂತೆ  ಕಾಣುತ್ತಿದ್ದಾನೆ ಎಂದು ಉರಗಪ್ರೇಮಿ ಸ್ನೇಕ್ ಸತೀಶ್ ಹೇಳಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಹಾವುಗಳ ವೈಜ್ಞಾನಿಕ ಅರಿವು ಕಾರ್ಯಕ್ರಮದಲ್ಲಿ `ಸ್ಲೈಡ್‌ಶೋ' ಮೂಲಕ ಮಾಹಿತಿ  ನೀಡಿದ ಅವರು, ಸಮೀಕ್ಷೆ ಪ್ರಕಾರ ಜೋಡಿ ಇಲಿಗಳು ಒಂದು ವರ್ಷದಲ್ಲಿ 1800 ಇಲಿಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತವೆ. ಈ ಇಲಿಗಳು ಶೇ 25ರಷ್ಟು ರೈತನ ಆಹಾರ ಬೆಳೆಗಳನ್ನು ತಿಂದು  ನಾಶಪಡಿಸುತ್ತವೆ. ಬಿಲದಲ್ಲಿ ಅಡಗುವ ಇಲಿಗಳನ್ನು ನಿಯಂತ್ರಣ ಮಾಡುವ ಏಕೈಕ ಜೀವಿ ಹಾವು ಎಂದು ಹೇಳಿದರು.

ಹಾವುಗಳ ಬಗ್ಗೆ ಜನತೆಗೆ ಬಹಳಷ್ಟು ತಪ್ಪು ಕಲ್ಪನೆಗಳಿವೆ. ನಾಗರಹಾವು 12 ವರ್ಷ ದ್ವೇಷ ಸಾಧಿಸುತ್ತದೆ ಎಂಬುದು ಸುಳ್ಳು. ಈ ಹಾವು ಬದುಕುವುದೇ 8ರಿಂದ 10 ವರ್ಷ. ಇಂತಹ ಆಧಾರ ರಹಿತ ಸುದ್ದಿ ಕೇವಲ ಸಿನಿಮಾಗಳಲ್ಲಿ ಮಾತ್ರ. ನಾಗರಹಾವು ಅಟ್ಟಿಸಿಕೊಂಡು ಬಂದು ಯಾರನ್ನು ಕಚ್ಚುವುದಿಲ್ಲ.  ತನಗೆ ಅಪಾಯ ಕಂಡು ಬಂದಾಗ ಮಾತ್ರ ಕುಕ್ಕುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ದೇಶದಲ್ಲಿ 274 ಬಗೆಯ ಹಾವುಗಳಿವೆ. ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ 160ರಿಂದ 170 ಜಾತಿ ಹಾವುಗಳಿವೆ. ಇವುಗಳಲ್ಲಿ ವಿಷಪೂರಿತ ಹಾವು ಕೇವಲ ನಾಲ್ಕು ಮಾತ್ರ ಎಂದು ತಿಳಿಸಿದರು. ನಾಗರಹಾವು ಸೇರಿದಂತೆ, ಕೊಳಕು ಮಂಡಲ, ಉರಿಮಂಡಲ ಹಾಗೂ ಕಟ್ಟು ಹಾವು  ವಿಷದಿಂದ ಕೂಡಿವೆ. ಹಾವು ಕಚ್ಚಿದ ಕೂಡಲೆ ಪ್ರಥಮ ಚಿಕಿತ್ಸೆ ಮಾಡಿಕೊಂಡು ಆಸ್ಪತ್ರೆಗೆ ತೆರಳಿ ಔಷಧಿ ಪಡೆಯಬೇಕು ಎಂದು ಸಲಹೆ ಹೇಳಿದರು. ಪ್ರಾಧ್ಯಾಪಕಡಾ. ರಘು, ಡಾ. ಎಂ.ಎನ್.ರಮೇಶ್ ಹಾಜರಿದ್ದರು. ಪಾಂಡುರಂಗಯ್ಯ ಸ್ವಾಗತಿಸಿ, ಅಭಿಲಾಷ್, ಅಮಲ ಥೋಮಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.