ADVERTISEMENT

ಹುದುಗೂರು: ಕುಡಿಯುವ ನೀರಿಗೂ ತತ್ವಾರ

ರವಿ ಎಸ್.
Published 11 ಜೂನ್ 2014, 9:54 IST
Last Updated 11 ಜೂನ್ 2014, 9:54 IST

ಕುಶಾಲನಗರ: ಕೊಳಚೆ ನೀರೇ ಇಲ್ಲಿ ಜೀವ ಜಲ, ಚಂದ್ರ ಕಂಡರೆ ರಾತ್ರಿ ಬೀದಿದೀಪ, ಕಾಡಾನೆಗಳೇ ನಡೆಯುವ ದಾರಿ ಇವರ ಬೀದಿ. ಇದು ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರಿನ ಗಂಧದ ಹಾಡಿ ಮತ್ತು ಕಾಳಿದೇವನಹೊಸಹಳ್ಳಿ ಹಾಡಿಗಳ ಜನರ ಬದುಕಿನ ಸ್ಥಿತಿ.

ಕೊಡಗು ಜಿಲ್ಲೆ ಎಂದ ಕೂಡಲೇ ಸ್ವಲ್ಪ ಸ್ಥಿತಿವಂತರ ಜನರಿರುವ ಜಿಲ್ಲೆ ಎಂಬ ಮನೋಭಾವ ಸಾಮಾನ್ಯ. ಆದರೆ, ಇಂದಿಗೂ ಎಷ್ಟೋ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ ಎನ್ನುವುದು ಮಾತ್ರ ಬೆಳಕಿನಷ್ಟೇ ಸತ್ಯ. ಹುದುಗೂರು ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳುವ ಮುಖ್ಯ ರಸ್ತೆಯಲ್ಲಿದೆ. ಮುಖ್ಯರಸ್ತೆಯಲ್ಲಿ ನಿಂತು ನೋಡುವ ಜನಪ್ರತಿನಿಧಿಗಳಿಗೆ ಹುದುಗೂರಿನ ವಿವಿಧ ಕಾಲೊನಿಗಳಲ್ಲಿನ ಜನರ ದುಃಸ್ಥಿತಿ ಮಾತ್ರ ಕಾಣುವುದಿಲ್ಲ.

ಮೂರು ತಲೆಮಾರುಗಳಿಂದ ಗಂಧದ ಕಾಲೊನಿಯಲ್ಲಿ ನೆಲೆಸಿರುವ ಹದಿನೈದು ಮತ್ತು ಕಾಳಿದೇವನಹೊಸಹಳ್ಳಿಯಲ್ಲಿರುವ 15 ಕುಟುಂಬಗಳು ಇಂದಿಗೂ ಕೊಳಚೆ ನೀರನ್ನೇ ಕುಡಿದು ಬದುಕಬೇಕಾಗಿದೆ.  ಈ ಕಾಲೊನಿಗಳಿಗೆ ಹೊಂದಿಕೊಂಡೇ ಹರಿಯುವ ಹಾರಂಗಿ ಜಲಾಶಯದ ಮುಖ್ಯ ಕಾಲುವೆಯಲ್ಲಿ ಜುಲೈಯಿಂದ ನವೆಂಬರ್‌ ತಿಂಗಳವರೆಗೆ ನೀರು ಹರಿಯುತ್ತದೆ. ಆದರೂ, ಒಂದೆಡೆ ಮಾತ್ರವೇ ನೀರು ತುಂಬಿಕೊಳ್ಳಲು ಅವಕಾಶವಿದೆ. ಹೀಗಾಗಿ ಗಂಧದ ಕಾಲೊನಿಯ ಜನ ನೀರು ತುಂಬಿಕೊಳ್ಳಲು ಒಂದು ಕಿಲೋಮೀಟರ್‌ ದೂರ ತೆರಳಬೇಕು.

ಇನ್ನು ಬೇಸಿಗೆ ಆರಂಭವಾಗುವ ಮುನ್ನವೇ ಕಾಲುವೆಯಲ್ಲಿ ನೀರು ನಿಲ್ಲಿಸುವುದರಿಂದ ಬೇಸಿಗೆಯಲ್ಲಿ ಹನಿ ನೀರಿಗಾಗಿ ಪರದಾಡಬೇಕು. ಹೀಗಾಗಿ ಜಲಾಶಯದಿಂದ ಜಿನುಗಿ ಕಾಲುವೆಯಲ್ಲಿ ನಿಲ್ಲುವ ಕೊಳಚೆ ನೀರಿನಲ್ಲೇ ಸ್ನಾನ, ಬಟ್ಟೆ ತೊಳೆಯುವದನ್ನ ಮಾಡುತ್ತಿದ್ದಾರೆ.  ಅದೇ ನೀರನ್ನೇ ಕುಡಿಯಬೇಕು. ಅಂದರೆ ಇದುವರೆಗೂ ಪಂಚಾಯಿತಿಯಾಗಲಿ ಅಥವಾ ಇನ್ನಾವ ಜನಪ್ರತಿನಿಧಿಯಾಗಲಿ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿಕೊಡುವ ಪ್ರಯತ್ನ ಮಾಡಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಹಿಂದಿನ ದಿನ ರಾಷ್ಟ್ರೀಯ ಪಕ್ಷವೊಂದರ ಮುಖಂಡರು ನೀರಿನ ಸೌಲಭ್ಯ ಒದಗಿಸುವುದಾಗಿ ಹೇಳಿ ಅಂದು ಕೊಳವೆ ಹಾಕಿಸಿದರು. ಮರುದಿನ ಮತದಾನವಾಯಿತು. ಇಂದಿಗೂ ಅದರಲ್ಲಿ ನೀರು ಬಂದಿಲ್ಲ. ಈಗಾಗಿ ನೀರು ಒದಗಿಸುವ ನೆಪದಲ್ಲಿ ಮತಪಡೆದು ಹೋದವರು ಇಂದಿಗೂ ತಿರುಗಿ ನೋಡಿಲ್ಲ ಎನ್ನುತ್ತಾರೆ ನಿವಾಸಿ ರೀನಾ.

ಹಿರಿಯ ರಾಜಕಾರಣಿ ಬೆಳ್ಯಪ್ಪ ಅವರ ಅವಧಿಯಲ್ಲಿ ಕಾಡು ಕಡಿಸಿ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಯಿತು. ಬಳಿಕ ಜಲ್ಲಿ ಕಲ್ಲು ಹಾಕಿಸಲಾಯಿತಾದೂ ಆ ಕಲ್ಲುಗಳೆಲ್ಲ ಈಗ ಮೇಲೆದ್ದು ಊರಿನ ಜನರನ್ನು ಅಣಕಿಸುತ್ತಿವೆ.  ಡಾಂಬರೀಕರಣ ಆಗಲೇ ಇಲ್ಲ. ರಸ್ತೆಯನ್ನು ಅರಣ್ಯದಲ್ಲೇ ಮಾಡಿರುವುದರಿಂದ ಸಂಜೆಯಾಯಿತೆಂದರೆ ಆನೆಗಳದ್ದೇ ರಾಜದಾರಿ. ಹೀಗಾಗಿಯೇ ಕಳೆದ ವರ್ಷ ವ್ಯಕ್ತಿಯೊಬ್ಬರು ಆನೆಗಳ ಕಾಲಿಗೆ ಸಿಕ್ಕಿ ಮೃತಪಟ್ಟರ ಎನ್ನುತ್ತಾರೆ ಗ್ರಾಮಸ್ಥರು.

ಒಂದೇ ಒಂದು ಬೀದಿ ದೀಪವಿಲ್ಲ. ಪಂಚಾಯಿತಿಯಲ್ಲಿ ಕೇಳಿದರೆ ನಮ್ಮ ಅಮಾಯಕತೆಯನ್ನು ಬಳಸಿಕೊಂಡು ಜೋರು ಮಾಡಿ ಬಾಯಿ ಮುಚ್ಚಿಸುತ್ತಾರೆ ಎನ್ನುತ್ತಾರೆ ಜನರು. ಇನ್ನು ಕಾಳಿದೇವನಹೊಸೂರಿನಲ್ಲಿ ಒಂದು ಮನೆಗೆ ಮಾತ್ರ ಹಕ್ಕುಪತ್ರ ಇದೆ. ಈ ಕಾಲೊನಿಗಳಿಗೆ ಸಂಪರ್ಕ ಕಲ್ಪಿಸಲು ಹಾರಂಗಿ ಕಾಲುವೆಗೆ ಅಡ್ಡಲಾಗಿ ಯಾವುದೋ ಕಾಲದಲ್ಲಿ ನಿರ್ಮಿಸಿರುವ ಸೇತುವೆ ಈಗ ಸಂಪೂರ್ಣ ಶಿಥಿಲಗೊಂಡಿದೆ. ಸೇತುವೆಯ ಎರಡೂ ಬದಿಗಳಲ್ಲಿ ಹಾಕಲಾಗಿರುವ ಕಂಬಿಗಳು ಸಂಪೂರ್ಣ ಮುರಿದು ಬಿದ್ದಿವೆ.

ಆದರೆ, ಇದೇ ಸೇತುವೆ ಮೇಲೆ ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾಗಿದ್ದು ಯಾವಾಗ ಅಪಾಯ ಎದುರಾಗುವುದೋ ಎಂಬ ಭಯದಲ್ಲೇ ಕಾಲ ದೂಡಬೇಕಾಗಿದೆ. ಒಟ್ಟಿನಲ್ಲಿ ಕುಡಿಯುವ ನೀರು, ವಿದ್ಯುತ್‌ದೀಪ, ರಸ್ತೆ ಸೇರಿದಂತೆ ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದೇ ಇಲ್ಲಿನ ಜನ ಸಮಸ್ಯೆಗಳ ಸುಳಿಯಲ್ಲೇ ಬದುಕಬೇಕಾಗಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸುತ್ತಾರೆಂದು ಗ್ರಾಮಸ್ಥರು ಕಾಯುತ್ತಿದ್ದಾರೆ.  

ಕುಡಿಯುವ ನೀರು ಕೊಡಿ
ಮೂರು ತಲೆಮಾರುಗಳಿಂದ ಇಲ್ಲಿ ನೆಲೆಕಂಡು ಕೊಂಡಿದ್ದೇವೆ. ಇಲ್ಲಿವರೆಗೂ ಯಾರೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಿಲ್ಲ. ಎರಡು ಬೋರ್‌ವೆಲ್‌ ಕೊರೆದು ನೀರು ಸರಿಯಾಗಿ ಬಂದಿಲ್ಲ ಎಂಬ ನೆಪವೊಡ್ಡಿ ಅಷ್ಟಕ್ಕೇ ಸುಮ್ಮನಾಗಿದ್ದಾರೆ. 
–ಎಚ್.ಕೆ. ರಾಮೇಗೌಡ, ನಿವಾಸಿ

ಜನಪ್ರತಿನಿಧಿಗಳ ನಿರ್ಲಕ್ಷ್ಯ
ಇಲ್ಲಿನ ಸಮಸ್ಯೆಗಳನ್ನು ಕುರಿತು ಇದುವರೆಗೆ ಪಂಚಾಯಿತಿ, ಎಂಎಲ್‌ಎ ವರೆಗೆ ಮನವಿ ಮಾಡಲಾಗಿದೆ. ಚುನಾವಣೆ ಸಂದರ್ಭ ಮಾತ್ರವೇ ಮತಕೇಳಿ ಬರುವ ಜನ ಪ್ರತಿನಿಧಿಗಳು ಬಳಿಕ ತಿರುಗಿ ನೋಡುತ್ತಿಲ್ಲ. ಇನ್ನು ಪ್ರತಿಭಟನೆಯೊಂದೇ ಉಳಿದಿರುವ ದಾರಿ.                       ––ದೊರೆಯಪ್ಪ, ನಿವಾಸಿ                  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.