ADVERTISEMENT

‘ಅಧ್ಯಾತ್ಮ ಮಾರ್ಗ ತೋರಿದ ದಾಸ ಸಾಹಿತ್ಯ’

ವಿಜಯ್ ಜೋಷಿ
Published 9 ಜನವರಿ 2014, 9:34 IST
Last Updated 9 ಜನವರಿ 2014, 9:34 IST

ಕೊಡಗಿನ ಗೌರಮ್ಮ ವೇದಿಕೆ (ಮಡಿಕೇರಿ):‘ಅರ್ಥವಿಲ್ಲ ಆಚಾರ – ವಿಚಾರಗಳನ್ನು ಮತ್ತು ಅಂಧಾನುಕರಣೆಯನ್ನು ಖಂಡಿಸುತ್ತ ಸ್ತ್ರೀಯರು ಮತ್ತು ಹಿಂದುಳಿದ ವರ್ಗಗಳಿಗೆ ಅಧ್ಯಾತ್ಮದ ಮಾರ್ಗ ತೋರಿಸಿದ್ದು ದಾಸ ಸಾಹಿತ್ಯದ ಅದ್ಭುತ ಕೊಡುಗೆ’ ಎಂದು ವಿದ್ವಾಂಸ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬುಧವಾರ ನಡೆದ ಕನ್ನಡದ ದಾಸ ಸಾಹಿತ್ಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಇತಿಹಾಸಕಾರರು, ಕನ್ನಡ ಸಾಹಿತ್ಯವನ್ನು ಜೈನ, ವೀರಶೈವ ಮತ್ತು ಬ್ರಾಹ್ಮಣ ಯುಗ ಎಂದು ವರ್ಗೀಕರಿಸುತ್ತಾರೆ. ಈ ವರ್ಗೀಕರಣಗಳು ಆಯಾ ವರ್ಗದ ಸಾಹಿತ್ಯವನ್ನು ಪ್ರತಿನಿಧಿಸುತ್ತವೆ ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ದಾಸ ಸಾಹಿತ್ಯ ಯಾವ ವರ್ಗಕ್ಕೂ ಸೀಮಿತವಾಗಲಿಲ್ಲ’ ಎಂದು ವಿವರಿಸಿದರು.

ವೀರಶೈವರ ಭಜನೆಗಳಲ್ಲಿ, ವೈಷ್ಣವ ಮಠಗಳಲ್ಲಿ, ದ್ಯಾಮವ್ವ – ದುರ್ಗವ್ವರ ಗುಡಿಗಳಲ್ಲಿ ದಾಸರ ಪದಗಳು ಪ್ರವೇಶ ಪಡೆದಿವೆ. ವಾಸ್ತವದಲ್ಲಿ ದಾಸ ಸಾಹಿತ್ಯವು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಜನಿಸಿದ್ದಲ್ಲ. ಪಂಡಿತರ ದೇವರನ್ನು, ಧರ್ಮದ ತಿರುಳನ್ನು ಮನೆ ಮಾತುಗಳಲ್ಲಿ ಹೇಳಿದವರು ದಾಸರು ಎಂದರು.

‘ಆಧುನಿಕತೆಯ ಪ್ರಶ್ನೆ’: ‘ದಾಸರ ಪದಗಳು, ಶರಣರ ವಚನಗಳು ಆಧುನಿಕ ಜ್ಞಾನ ಮೀಮಾಂಸೆಯ ಅಹಂಕಾರವನ್ನು ಪ್ರಶ್ನಿಸುತ್ತವೆ. ದಾಸ ಸಾಹಿತ್ಯದ ಜನಕರು ಸತ್ಯದ ಅನ್ವೇಷಣೆಯನ್ನು ಪರಿವ್ರಾಜಕ ನೆಲೆಯಲ್ಲಿ ನಡೆಸಿದರು. ನಾವು ದಾಸರೆಡೆಗೆ ಮರಳಿದರೆ ಎಲ್ಲೋ ಇರುವ ವೈಕುಂಠ ಇಲ್ಲೇ ಕಾಣುತ್ತದೆ’ ಎಂದು ಉಪನ್ಯಾಸಕ ಡಾ. ಶಿವರಾಮ ಶೆಟ್ಟಿ ಹೇಳಿದರು. 19ನೇ ಶತಮಾನದವರೆಗೂ ತೋಂಡಿ ಸಂಪ್ರದಾಯದಲ್ಲೇ ಉಳಿದಿದ್ದ ದಾಸರ ಪದಗಳು ಅನಂತರದಲ್ಲಿ ಪಠ್ಯೀಕರಣಗೊಂಡವು ಎಂದು ಹೇಳಿದರು.

ಡಾ.ಮಧುಮತಿ ದೇಶಪಾಂಡೆ ಮಾತನಾಡಿ, ‘ಸ್ತ್ರೀಯರ ಸಂಗ ತಮ್ಮ ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಸಾಧನೆಗೆ ಅಡ್ಡಿ ಎಂಬ ಮಾತು ಆರಂಭದಲ್ಲಿ ಕೆಲವು ದಾಸರ ಪದಗಳಲ್ಲಿ ಕೇಳಿಬರುತ್ತವೆ ಎಂದು ಹೇಳಿದರು.

ಕರ್ನಾಟಕ ಸಂಗೀತ ಕಲಾವಿದ ಆರ್‌.ಕೆ. ಪದ್ಮನಾಭ ಮಾತನಾಡಿ, ‘ಸಂಗೀತವೆಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟವರು ಹರಿದಾಸರು. ತ್ಯಾಗರಾಜರೂ ಪುರಂದರ ದಾಸರನ್ನು ಸ್ಮರಿಸಿದ್ದಾರೆ ಎಂದರೆ ಭಾಷೆಗೆ ಹರಿದಾಸರ ಕೊಡುಗೆಯನ್ನು ಅರಿಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.