ADVERTISEMENT

‘ದಶಮಂಟಪ ಸಮಿತಿಗೆ ರೂ. 4 ಲಕ್ಷ ನೀಡಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:39 IST
Last Updated 23 ಸೆಪ್ಟೆಂಬರ್ 2013, 9:39 IST

ಮಡಿಕೇರಿ: ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಹತ್ತು ದಶಮಂಟಪಗಳಿಗೂ ತಲಾ ರೂ. 4 ಲಕ್ಷ ಹಾಗೂ ನಾಲ್ಕು ಕರಗ ಸಮಿತಿಗಳಿಗೆ ರೂ.1.50 ಲಕ್ಷ ಅನುದಾನ ಮಂಜೂರು ಮಾಡುವಂತೆ ದಶಮಂಟಪ ಸಮಿತಿ ಪದಾಧಿಕಾರಿಗಳು ಕೋರಿದ್ದಾರೆ.
ನಗರದಲ್ಲಿ ಶನಿವಾರ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್‌ ಅವರ ಬಳಿ ದಶಮಂಟಪ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಕುರಿತು ಮನವಿ ಪತ್ರ ಸಲ್ಲಿಸಿದರು.

ಮಂಟಪ ಸ್ಪರ್ಧೆಯಲ್ಲಿ ವಿಜೇತ ಮಂಟಪಗಳಿಗೆ ಪ್ರಥಮ ಬಹುಮಾನವಾಗಿ ರೂ.2 ಲಕ್ಷ ಮೌಲ್ಯದ ಚಿನ್ನದ ನಾಣ್ಯ, ದ್ವಿತೀಯ ಬಹುಮಾನ ರೂ.1 ಲಕ್ಷ ಮೌಲ್ಯದ ಹಾಗೂ ತೃತೀಯ ಬಹುಮಾನ ರೂ.75 ಸಾವಿರದ ಚಿನ್ನದ ನಾಣ್ಯವನ್ನು ಕೂಡುವ ಜೊತೆಗೆ ಉಳಿದ 7 ಮಂಟಪಗಳಿಗೂ ಸಮಾಧಾನಕರ ಬಹುಮಾನ ನೀಡಬೇಕು ಎಂದು ಅವರು ಕೋರಿದರು.

ಕರಡ ಹೊರಡುವ ದಿನದಂದು ದೀಪದ ವ್ಯವಸ್ಥೆ ಕಲ್ಪಿಸಬೇಕು. ಪಂಪಿನ ಕರೆಯಿಂದ ಮಾರುಕಟ್ಟೆ ವರೆಗೆ ಸಂಜೆ 6ರಿಂದ 8ಗಂಟೆವರೆಗೆ ವಾಹನ ಸಂಚಾರವನ್ನು ನಿಷೇಧಿಸಲು ಕ್ರಮ ವಹಿಸುವಂತೆ ಅವರು ಮನವಿ ಮಾಡಿದರು.

ದಸರಾ ಮೆರವಣಿಗೆ ಸಂದರ್ಭ ಪ್ರತಿಯೊಂದು ಮಂಟಪದ ಬಳಿ ಪೊಲೀಸರು ಹಾಗೂ ತಲಾ ಇಬ್ಬರು ಚೆಸ್ಕಾಂ ಮತ್ತು ದೂರವಾಣಿ ಇಲಾಖಾ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ಉತ್ಸವದಲ್ಲಿ ತೀರ್ಪುಗಾರರನ್ನು ಮಂಟಪಗಳ ಬಳಿ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಕಲ್ಪಿಸಬೇಕು.

ದಶ ಮಂಟಪಗಳು ಚಲಿಸುವ ರಸ್ತೆಗಳ ಎರಡು ಬದಿಗಳಲ್ಲಿ ರಸ್ತೆ ಅಗಲಿಕರಣ ಹಾಗೂ ಗುಂಡಿಗಳನ್ನು ಮುಂಚಿಸಿ, ಡಾಮರೀಕರಣ ಮತ್ತು ಅಡ್ಡಲಾಗಿರುವ ಮರಗಳ ರೆಂಬೆಗಳನ್ನು ಕಡಿಸಲು ಕ್ರಮ ವಹಿಸಬೇಕೆಂದು ಅವರು ಕೋರಿದರು.  ಈ ಸಂದರ್ಭದಲ್ಲಿ ದಶಮಂಟಪ ಸಮಿತಿ ಅಧ್ಯಕ್ಷ ವಿ.ಎಸ್‌. ವಿನೋದ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಎಚ್‌. ಮಂಜುನಾಥ್‌ ಹಾಗೂ ದಶ ಮಂಟಪಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.