ADVERTISEMENT

‘ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರು ಪ್ರಯತ್ನಿಸಲಿ’-

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 8:46 IST
Last Updated 2 ಜನವರಿ 2014, 8:46 IST

ನಾಪೋಕ್ಲು: ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಮೂಲೆ ಗುಂಪು ಮಾಡುವುದು ಸರಿಯಲ್ಲ, ನಾಡಿನ ಹಿರಿಯರು ಶಿಕ್ಷಣಾಭಿವೃದ್ಧಿಯ ಚಿಂತನೆಯಿಂದ ಕಷ್ಟಪಟ್ಟು ಸ್ಥಾಪಿಸಿದ ಶಾಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ, ಉಳಿಸಿ- ಬೆಳೆಸುವ ಜವಾಬ್ದಾರಿ ಗ್ರಾಮಸ್ಥರ ಮೇಲೂ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಅಭಿಪ್ರಾಯಪಟ್ಟರು.

ಸಮೀಪದ ಅಜ್ಜಿಮುಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದ ಕ್ರೀಡಾಕೂಟವನ್ನು ಉದ್ಘಾಟಿಸಿ  ಮಾತನಾಡಿದರು.

ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಆದರೂ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಶಿಕ್ಷಕರು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ಈ ಸಮಸ್ಯೆಗೆ ಶಾಲೆಗಳಲ್ಲಿನ ಮೂಲ ಸೌಲಭ್ಯಗಳ ಕೊರತೆಯೇ ಕಾರಣ  ಎಂದರು.

ಮೊದಲ ಬಾರಿಗೆ  ಆಯೋಜಿಸಿದ  ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ. ಉತ್ತಪ್ಪ ವಹಿಸಿದ್ದರು.

ವೇದಿಕೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಯಾಟಂಡ ಸುಮಿತ್ರಾ ದೇವಯ್ಯ, ಸದಸ್ಯರಾದ  ಕುಲ್ಲೇಟಿರ ಅರುಣ್ ಬೇಬ, ಮುತ್ತುರಾಣಿ ಅಚ್ಚಪ್ಪ, ಮಡಿಕೇರಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಕ್ರು ದೇವೇಗೌಡ, ಚೆರಿಯಪರಂಬು ಶಾಲಾ ಶಿಕ್ಷಕರ ವೃಂದ ಸೇರಿದಂತೆ ಶಿಕ್ಷಕ ಸಿ.ಕೆ. ತಿಮ್ಮಯ್ಯ, ಶಿಕ್ಷಕಿ ನೇತ್ರಾವತಿ, ಮುಖ್ಯ ಶಿಕ್ಷಕ ಸುಕುಮಾರ್ ತೊರೆನೂರು, ಅತಿಥಿ ಶಿಕ್ಷಕರಾದ ರೆಹಮತ್, ಮೆವರಿಸ್ ಡಿಸೋಜಾ, ಅಂಗನವಾಡಿ ಶಿಕ್ಷಕಿ ಸುಜಾತ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.