ADVERTISEMENT

‘ಸಾಹಿತ್ಯ ಕ್ಷೇತ್ರಕ್ಕೆ ಗೌರಮ್ಮ ಕೊಡುಗೆ ಅಪಾರ’

ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 7:12 IST
Last Updated 14 ಸೆಪ್ಟೆಂಬರ್ 2013, 7:12 IST

ಮಡಿಕೇರಿ: ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯ ನೋವು ನಲಿವಿನ ಬಗ್ಗೆ ಬೆಳಕು ಚೆಲ್ಲಿದ ಸಾಹಿತಿ ಗೌರಮ್ಮ ಅವರ ಕೊಡುಗೆ ಅಪಾರ ಎಂದು ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎನ್.ಪಿ. ಕಾವೇರಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಗೌರಮ್ಮ ದತ್ತಿ ಲೇಖಕಿ ಪ್ರಶಸ್ತಿ ಪ್ರದಾನ ಹಾಗೂ ಗೌರಮ್ಮ ದತ್ತಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಶಿಕ್ಷಕರಿಗೆ ಸನ್ಮಾನ,  ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಡಗಿನ ಇತಿಹಾಸದಲ್ಲಿ ಅಗ್ರಗಣ್ಯರಾದ ಮಹಿಳಾ ಸಾಹಿತಿ ಗೌರಮ್ಮ ಅತಿ ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ಅಲ್ಪಾವಧಿಯಲ್ಲಿಯೇ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಗೌರಮ್ಮ ದತ್ತಿ ಪ್ರಶಸ್ತಿಯನ್ನು 2ನೇ ವರ್ಷ ನೀಡುತ್ತಿದ್ದು, ಈ ಮೂಲಕ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಹಾಸನದ ಸಾಹಿತಿ ಕೆ.ಟಿ. ಜಯಶ್ರೀ ಅವರು ‘ಗೌರಮ್ಮ ಕಥೆಗಳಲ್ಲಿ ಮಹಿಳಾ ಕಾಳಜಿ’ ವಿಷಯದ ಕುರಿತು ಹಾಗೂ ಬೆಂಗಳೂರಿನ ಸಾಹಿತಿ ಎಂ.ಎಸ್. ಶಶಿಕಲಾ ಗೌಡ ಅವರು ‘ಸಾಹಿತ್ಯ ಮತ್ತು ಮಹಿಳಾ ಸ್ವತಂತ್ರ’ ಕುರಿತು ಉಪನ್ಯಾಸ ನೀಡಿದರು.

ಮಡಿಕೇರಿ ಫೀಲ್ಡ್‌ ಮಾಷರ್ಲ್‌ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಹೊಟ್ಟೆಂಗಡ ಸ್ವಾತಿ ಬಹುಮಾನ ವಿತರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮಿತಿಗಳ ಅಧ್ಯಕ್ಷರಾದ ಎಸ್.ಐ. ಮುನೀರ್ ಅಹಮದ್, ಭಾರದ್ವಾಜ ಆನಂದ ತೀರ್ಥ, ಕಸಾಪ ಜಿಲ್ಲಾ ಗೌರವ ಕೋಶಾಧಿಕಾರಿ ಬಿ.ಎಂ.ಕೆ. ವಾಸು ರೈ ಹಾಜರಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಬಿ.ಎ. ಷಂಶುದ್ದೀನ್ ಸ್ವಾಗತಿಸಿದರು. ಶ್ವೇತಾ ರವೀಂದ್ರ ನಿರೂಪಿಸಿದರು. ಕಸಾಪ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಎಸ್.ಐ. ಮುನೀರ್ ಅಹಮದ್ ವಂದಿಸಿದರು.

`ಶರ್ಮಿಳಾ ರಮೇಶ್‌ಗೆ ಗೌರಮ್ಮ ದತ್ತಿ ಪ್ರಶಸ್ತಿ':
`ಕಂಪ್ಯೂಟರ್ ಲೋಕದ ಪುಟಾಣಿಗಳು' ಪುಸ್ತಕದ ಲೇಖಕಿ ಸೋಮವಾರಪೇಟೆ ಪಟ್ಟಣದ ನಿವಾಸಿ ಶರ್ಮಿಳಾ ರಮೇಶ್ ಅವರಿಗೆ ಗೌರಮ್ಮ ದತ್ತಿಯ ಜಿಲ್ಲಾ ಲೇಖಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ನಡೆಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಚೇರಂಬಾಣೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಿ. ಪವಿತ್ರ ಪ್ರಥಮ ಸ್ಥಾನ (ರೂ.1,000), ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಎಚ್. ಸಿಂಚನಾ ದ್ವಿತೀಯ (ರೂ.7,500), ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಲೀನಾ ಅವರಿಗೆ ತೃತೀಯ (ರೂ.500) ಬಹುಮಾನ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ ಶಾಲಾ ಶಿಕ್ಷಕರಾದ ಸತೀಶ್‌ಕುಮಾರ್, ಶಿವದೇವಿ ಮನಿಶ್ಚಂದ್ರ, ವಿ.ವಿ. ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.

ಗೌರಮ್ಮ ದತ್ತಿಯ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ಸುಮಾರು 46 ಶಾಲಾ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ಕೂಡ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.