ADVERTISEMENT

ಕೊಡಗು: ಜಿಲ್ಲೆಗೆ ಲಗ್ಗೆ ಇಟ್ಟ ಭತ್ತದ ಕಟಾವು ಯಂತ್ರಗಳು

ಕಾರ್ಮಿಕರ ಕೊರತೆಯಿಂದ ಕಂಗೆಟ್ಟಿದ್ದ ರೈತರಿಗೆ ವರದಾನ; ಫಸಲು ಮನೆ ಸೇರಿಸುವ ಧಾವಂತದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 13:46 IST
Last Updated 4 ಜನವರಿ 2019, 13:46 IST
ನಾಪೋಕ್ಲು ಹೊರವಲಯದಲ್ಲಿ ರೈತ ಬಿದ್ದಾಟಂಡ ರೋಜಿ ಚಿಣ್ಣಪ್ಪ ಅವರ ಭತ್ತದ ಗದ್ದೆಯಲ್ಲಿ ಬೆಳೆ ಕಟಾವು ಮಾಡುತ್ತಿರುವ ಯಂತ್ರ
ನಾಪೋಕ್ಲು ಹೊರವಲಯದಲ್ಲಿ ರೈತ ಬಿದ್ದಾಟಂಡ ರೋಜಿ ಚಿಣ್ಣಪ್ಪ ಅವರ ಭತ್ತದ ಗದ್ದೆಯಲ್ಲಿ ಬೆಳೆ ಕಟಾವು ಮಾಡುತ್ತಿರುವ ಯಂತ್ರ   

ನಾಪೋಕ್ಲು: ಭತ್ತದ ಕಟಾವು ಯಂತ್ರಗಳು ಕೊಡಗು ಜಿಲ್ಲೆಗೆ ಲಗ್ಗೆ ಇಟ್ಟಿವೆ. ಜಿಲ್ಲೆಯ ಬಹುತೇಕ ರೈತರು ಈ ಬಾರಿ ಭತ್ತದ ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದಾರೆ.‌

ಜಿಲ್ಲೆಯಲ್ಲಿ ಕಾಫಿ ಕೊಯ್ಲಿನ ಕೆಲಸ ಬಿರುಸುಗೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ರೊಬಸ್ಟಾ ಕಾಫಿ ಬೇಗನೇ ಹಣ್ಣಾಗುತ್ತಿದೆ. ಕೂಲಿ ಕಾರ್ಮಿಕರು ಕಾಫಿ ಕೊಯ್ಲಿಗೆ ಉತ್ಸಾಹ ತೋರಿಸುತ್ತಿದ್ದಾರೆ. ಇದರಿಂದ ಭತ್ತದ ಕೊಯ್ಲಿಗೆ ಕಾರ್ಮಿಕರ ಕೊರತೆ ಎದುರಾಗುತ್ತಿದೆ. ಅಲ್ಲದೆ, ಮೋಡ ಕವಿದ ವಾತಾವರಣವೂ ಬೆಳೆಗಾರರನ್ನು ಕಾಡುವಂತೆ ಮಾಡಿದೆ. ಕೊಯ್ಲಿಗೆ ಬಂದಿದ್ದ ಭತ್ತವನ್ನು ಕಟಾವು ಮಾಡಲು ಫಸಲು ಮನೆ ತುಂಬಿಸಿಕೊಳ್ಳುವ ಧಾವಂತದಲ್ಲಿ ಜನರಿದ್ದಾರೆ. ಹೀಗಾಗಿ, ಕಟಾವು ಯಂತ್ರಗಳ ಮೊರೆ ಹೋಗಿದ್ದಾರೆ.

ಈ ಯಂತ್ರಗಳು ಹುಲ್ಲು ಮತ್ತು ಭತ್ತವನ್ನು ಪ್ರತ್ಯೇಕಿಸುತ್ತವೆ. ಜಾನುವಾರುಗಳಿಗೆ ಬಳಕೆಯಾಗುವ ಹುಲ್ಲಿನ ಪ್ರಮಾಣ ಕಡಿಮೆಯಾದರೂ ಭತ್ತವನ್ನು ಪ್ರತ್ಯೇಕಿಸಿ ಕೊಡುವುದರಿಂದ ರೈತರ ಸಮಯ ಉಳಿತಾಯವಾಗುತ್ತಿದೆ.

ADVERTISEMENT

ಕಟಾವು ಯಂತ್ರದ ಬಾಡಿಗೆ ಗಂಟೆಗೆ ₹2,700 ನಿಗದಿಪಡಿಸಲಾಗಿದೆ. ಎಕರೆಗಟ್ಟಲೇ ಬೆಳೆದ ಭತ್ತವನ್ನು 2-3 ದಿನಗಳಲ್ಲಿ ಕಟಾವು ಮಾಡಬಹುದು. ಕಾರ್ಮಿಕರನ್ನು ಅವಲಂಬಿಸಿದರೆ ಕೆಲಸ ವಾರಗಟ್ಟಲೆ ಹಿಡಿಯುತ್ತದೆ. ಭತ್ತದ ಗದ್ದೆಗಳ ಕೆಲಸ ಹಾಗೂ ಕಾಫಿ ತೋಟಗಳ ಕೆಲಸದ ನಿರ್ವಹಣೆಯನ್ನು ಒಟ್ಟಿಗೆ ನಿಭಾಯಿಸುವುದು ಕಷ್ಟದ ಕೆಲಸ ಎಂದು ರೈತ ಬಿದ್ದಾಟಂಡ ರೊಜಿ ಚಿಣ್ಣಪ್ಪ ಹೇಳಿದರು. ‌

ಈ ಹಿಂದೆ ಅಸ್ಸಾಂ ಕಾರ್ಮಿಕರು ಲಭ್ಯವಿದ್ದರು. ಈಗ ಅವರ ಸಂಖ್ಯೆಯೂ ಕಡಿಮೆಯಾಗಿದೆ. ಹೆಚ್ಚು ಶ್ರಮವಿರುವ ಭತ್ತದ ಕೊಯ್ಲು ಕೆಲಸಗಳಿಗೆ ಕಾರ್ಮಿಕರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಟಾವು ಯಂತ್ರಗಳು ರೈತರಿಗೆ ವರದಾನವಾಗಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.