ADVERTISEMENT

31ರಂದು ಜನರಲ್‌ ತಿಮ್ಮಯ್ಯ ಜನ್ಮದಿನಾಚರಣೆ

ರಣಾಂಗಣದಲ್ಲಿ ಮೆರೆದ ಶೌರ್ಯದ ಚಿತ್ರಣ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 13:59 IST
Last Updated 30 ಮಾರ್ಚ್ 2019, 13:59 IST
ಜನರಲ್‌ ತಿಮ್ಮಯ್ಯ ಮ್ಯೂಸಿಯಂ
ಜನರಲ್‌ ತಿಮ್ಮಯ್ಯ ಮ್ಯೂಸಿಯಂ   

ಮಡಿಕೇರಿ: ಜನರಲ್‌ ಕೆ.ಎಸ್‌.ತಿಮ್ಮಯ್ಯಅವರ 113ನೇ ಜನ್ಮ ದಿನಾಚರಣೆ ಇಂದು (ಭಾನುವಾರ) ಸನ್ನಿಸೈಡ್‌ ನಿವಾಸದಲ್ಲಿ ನಡೆಯಲಿದೆ. ಜನರಲ್‌ತಿಮ್ಮಯ್ಯಹಾಗೂ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಫೋರಂ ಪದಾಧಿಕಾರಿಗಳು, ತಿಮ್ಮಯ್ಯ ಅಭಿಮಾನಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ, ಜನಪ್ರತಿನಿಧಿಗಳು ಯಾರೂ ವೇದಿಕೆ ಮೇಲೇರುತ್ತಿಲ್ಲ.

ತಿಮ್ಮಯ್ಯ ಅವರ ಸನ್ನಿಸೈಡ್‌ ನಿವಾಸವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹ 5 ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಸನ್ನಿಸೈಡ್‌ ನಿವಾಸವನ್ನು ಸಂಪೂರ್ಣ ಚಿತ್ರಣವನ್ನೇ ಬದಲಾವಣೆ ಮಾಡಲಾಗಿದ್ದು, ಮುಂದಿನ ವರ್ಷ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ.

ADVERTISEMENT

ಕಲಾವಿದರ ಕೈಚಳಕ: ತಿಮ್ಮಯ್ಯ ಹಾಗೂಸೈನಿಕರು ರಣಾಂಗಣದಲ್ಲಿ ಮೆರೆದ ಶೌರ್ಯವನ್ನು ಚಿತ್ರಿಸಲಾಗಿದೆ. ಕಲಾಕೃತಿಗಳು ಕೂಡ ಪೂರ್ಣ ಆಗಿದ್ದು, ಭಾನುವಾರ ಸನ್ನಿಸೈಡ್‌ಗೆ ಬಂದರೆ ಅವುಗಳನ್ನು ಕಣ್ತುಂಬಿಕೊಳ್ಳಬಹುದು.ಕೊಡವ ಸಂಸ್ಕೃತಿ, ಸೇನಾ ಪರಂಪರೆ ಸೇರಿದಂತೆ ನಾನಾ ಚಿತ್ರಗಳು ಕಲಾವಿದರ ಕೈಯಲ್ಲಿ ಅರಳಿವೆ.

ಕಳೆದ ವರ್ಷ ಮ್ಯೂಸಿಯಂಗೆ ಯುದ್ಧ ಟ್ಯಾಂಕರ್‌ ಬಂದಿತ್ತು. ಅದಕ್ಕೂ ಬಣ್ಣ ಬಳಿದು ಆವರಣದಲ್ಲಿ ನಿಲ್ಲಿಸಲಾಗಿದೆ. ಇದೇ ಆವರಣದಲ್ಲಿ ಯುದ್ಧ ಸ್ಮಾರಕವನ್ನೂ ಕಳೆದ ವರ್ಷ ಲೋಕಾರ್ಪಣೆ ಮಾಡಲಾಗಿತ್ತು.

ಜನರಲ್‌ ಕೆ.ಎಸ್‌. ತಿಮ್ಮಯ್ಯ ಮ್ಯೂಸಿಯಂಗೆ ಭಾರತೀಯ ಸೇನೆಯ ಯೋಧರು ಬಳಸಿದ್ದ 24 ಶಸ್ತ್ರಾಸ್ತ್ರಗಳನ್ನು ಪೂರೈಸಲಾಗಿದ್ದು, ಅವುಗಳನ್ನು ಭಾನುವಾರ ಪ್ರದರ್ಶನಕ್ಕೆ ಇಡಲು ಫೋರಂ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ‘ಸನ್ನಿಸೈಡ್‌ ನಿವಾಸ’ಕ್ಕೆ ಭೂಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಆಸಕ್ತಿ ವಹಿಸಿ ಶಸ್ತ್ರಾಸ್ತ್ರ ಕಳುಹಿಸಿಕೊಟ್ಟಿದ್ದಾರೆ.

50ರಿಂದ 60 ವರ್ಷಗಳ ಹಿಂದಿನ ಲೈಟ್ ಮಿಷನ್ ಗನ್‌, ಮೀಡಿಯಂ ಮಿಷನ್ ಗನ್‌, ಸೆಲ್ಫ್ ಲೋಡಿಂಗ್ ರೈಫಲ್‌ಗಳು, 7.62 ಮತ್ತು 303 ಬ್ಯಾರಲ್‌ ರೈಫಲ್‌ಗಳು, ರಾಕೆಟ್ ಲಾಂಚರ್‌, 32 ಎಂ.ಎಂ ರೈಫಲ್, ಪಾಯಿಂಟ್ 38 ರೈಫಲ್‌ಗಳು ಬಂದಿದ್ದು ಭಾನುವಾರ ಪ್ರದರ್ಶನಗೊಳ್ಳಲಿವೆ.

ಸಿದ್ಧವಾಗುತ್ತಿದೆ ಮ್ಯೂಸಿಯಂ: ಅನುದಾನದ ಅಡೆತಡೆಯ ನಡುವೆ ಮ್ಯೂಸಿಯಂ ಕಾಮಗಾರಿಗಳು ನಡೆಯುತ್ತಿವೆ. ತಿಮ್ಮಯ್ಯ ಅವರು ವಾಸವಿದ್ದ ಮನೆಯನ್ನು ಆಕರ್ಷಣೀಯ ಕೇಂದ್ರವಾಗಿಸುವ ಪ್ರಯತ್ನಗಳು ಸಾಗುತ್ತಿವೆ. ಹೊಸದಾಗಿ ಕಿಟಕಿ, ಬಾಗಿಲು ಜೋಡಿಸಲಾಗಿದೆ. ಹೊಸದಾಗಿ ಹೆಂಚುಗಳನ್ನು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.