ADVERTISEMENT

20 ಕಾಮಗಾರಿಗಳಿಗೆ ಪ.ಪಂ. ಅನುಮೋದನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 10:03 IST
Last Updated 14 ಡಿಸೆಂಬರ್ 2013, 10:03 IST

ಕುಶಾಲನಗರ: ಪಟ್ಟಣ ಪಂಚಾಯಿತಿಯ 2013–14ನೇ ಸಾಲಿನ ಮುಕ್ತನಿಧಿ ಅನುದಾನದ ಅಡಿಯಲ್ಲಿ ಕಾಯ್ದಿಡಲಾದ ಮೊತ್ತದಲ್ಲಿ ವಿವಿಧ 20 ಕಾಮಗಾರಿಗಳಿಗೆ ಶುಕ್ರವಾರ ನಡೆದ ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾರುಕಟ್ಟೆ ಅಭಿವೃದ್ಧಿ, ರಸ್ತೆಗೆ ಕಾಂಕ್ರೀಟ್ ಹಾಕುವುದು, ಚರಂಡಿ ನಿರ್ಮಾಣ, ಚರಂಡಿಗೆ ಸ್ಲ್ಯಾಬ್ ಅಳವಡಿಕೆ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಒಟ್ಟು 20 ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.

ಕಡಿಮೆ ಕಮಿಷನ್ ನಮೂದಿಸಿರುವವರಿಗೆ ಕಾಮಗಾರಿಗಳನ್ನು ಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ತಿಳಿಸಿದರು. ಈ ಕುರಿತು  ಸದಸ್ಯ ಶರವಣ್‌ಕುಮಾರ್ ಮಾತನಾಡಿ ಕಡಿಮೆ ವೆಚ್ಚಕ್ಕೆ ಕೆಲಸ ಮಾಡಲು ಕಾಮಗಾರಿ ಗುತ್ತಿಗೆ ಕೊಟ್ಟು ನಂತರ ಕಳಪೆ ಕಾಮಗಾರಿ ನಡೆಯುವಂತೆ ಆಗಬಾರದು ಎಂದರು. ಇದಕ್ಕೆ ದನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಚರಣ್, ಈ ಹಿಂದೆ ಒಂದು ಕಾಮಗಾರಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಸಿಮೆಂಟ್‌ ಬಳಸಿರುವುದು ಕಂಡುಬಂದಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಡಿ. ಚಂದ್ರು ಮಾತನಾಡಿ ಕಾಮಗಾರಿಗಳನ್ನು ನಡೆಸುವಾಗ ಆಯಾ ವಾರ್ಡುಗಳ ಸದಸ್ಯರ ಗಮನಕ್ಕೆ ತರಬೇಕು ಎಂದರು. ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ವಾರ್ಡ್‌ ಸದಸ್ಯರು ಹಾಜರಿದ್ದು ಅವುಗಳ ಗುಣಮಟ್ಟ ಕಾಪಾಡುವಂತೆ ಎಚ್ಚರ ವಹಿಸಲು ಸಹಕರಿಸಬೇಕು ಎಂದರು.

ಈಚೆಗೆ ನಿಧನರಾದ ಶ್ರೀಕಂಠದತ್ತ ಒಡೆಯರ್ ಮತ್ತು ನೆಲ್ಸನ್ ಮಂಡೇಲಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷೆ ಪಾರ್ವತಿ, ಕರಿಯಪ್ಪ, ಸುರೇಯಾ ಭಾನು, ಪ್ರಮೋದ್ ಮುತ್ತಪ್ಪ, ರಶ್ಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.