ADVERTISEMENT

21ರಂದು ಕಾವೇರಿ ಕಲಾಕ್ಷೇತ್ರದಲ್ಲಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:28 IST
Last Updated 13 ಡಿಸೆಂಬರ್ 2019, 12:28 IST

ಮಡಿಕೇರಿ: ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಇದೇ 21ರಂದು ಕಾರ್ಪೊರೇಟ್‌ ಕೇಸರಿ ಫ್ಯಾಸಿಸ್ಟ್‌ ದಾಳಿ ವಿರೋಧಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ- ಲೆನಿನ್‌ವಾದಿ) ರೆಡ್ ಸ್ಟಾರ್ ಸಮಿತಿ ಮುಖಂಡ ಡಿ.ಎಸ್. ನಿರ್ವಾಣಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ದುರುದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದು, ಮುಸ್ಲಿಂ ವಿರೋಧಿ ದೋರಣೆಯನ್ನು ಅನುಸರಿಸುತ್ತಿದೆ ಎಂದು ಆಪಾದಿಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಅನ್ನ, ಆಹಾರಕ್ಕಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಸಮಸ್ಯೆ ಬಗೆಹರಿಸುವ ಬದಲು ದಮನಕಾರಿ ನೀತಿಯನ್ನು ಕೇಂದ್ರ ಸರ್ಕಾರವು ಅನುಸರಿಸುತ್ತಿದೆ ಎಂದು ದೂರಿದರು.

ADVERTISEMENT

ರೈತ ಸಂಘ ಜಿಲ್ಲಾ ಅಧ್ಯಕ್ಷ ಸಣ್ಣಪ್ಪ ಮಾತನಾಡಿ, ಹಿಂದುತ್ವದ ಆಧಾರದ ಮೇಲೆ ದೇಶವನ್ನು ಆಳುವ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಪೊರೇಟ್‌ಗಳಿಗೆ ಲಾಭದಾಯಕವಾಗಿದ್ದು, ಜನಸಾಮಾನ್ಯರನ್ನು ಬೀದಿಗೆ ತಳ್ಳುತ್ತಿದೆ ಎಂದು ದೂರಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಫ್ಯಾಸಿಟ್ಸ್‌ ನೀತಿ, ಕೋಮುವಾದ ಹೆಚ್ಚಾಗಿದ್ದು, ದಲಿತರು, ಆದಿವಾಸಿ, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಇದೀಗ ಎನ್‌ಆರ್‌ಸಿ ಕಾಯ್ದೆ ಜಾರಿ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶಪಡಿಸಲು ಯತ್ನಿಸಲಾಗುತ್ತಿದೆ ಎಂದು ದೂರಿದರು.

ಸಮಿತಿ ಕಾರ್ಯದರ್ಶಿ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.