ADVERTISEMENT

30 ದಿನಗಳ ನಂತರವೇ ಸಿಲಿಂಡರ್ ಪೂರೈಕೆ ನಿಯಮ ಸುಳ್ಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 5:45 IST
Last Updated 4 ಆಗಸ್ಟ್ 2012, 5:45 IST

ಮಡಿಕೇರಿ: ಗ್ರಾಹಕರಿಗೆ 30 ದಿನಗಳ ನಂತರವೇ ಸಿಲಿಂಡರ್ ನೀಡುವುದಾಗಿ ತಾವೇ ಸೃಷ್ಟಿಸಿಕೊಂಡಿರುವ ಕಾನೂನು ಬಾಹಿರ ನಿಯಮವನ್ನು ಗ್ಯಾಸ್ ಏಜೆನ್ಸಿಗಳು ಕೈಬಿಡದಿದ್ದರೆ ಅವುಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಬಿಜೆಪಿ ಎಚ್ಚರಿಕೆ ನೀಡಿದೆ.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ, ಇಂತಹ ದೊಂದು ನಿಯಮವನ್ನು ಸರ್ಕಾರವಾಗಲಿ ಅಥವಾ ಗ್ಯಾಸ್ ಕಂಪೆನಿಗಳಾಗಲಿ ರೂಪಿಸಿಲ್ಲ ಎಂದರು.

ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಎಲ್ಲ ದಾಖಲೆಗಳನ್ನು ಪಡೆಯಲಾಗಿದ್ದು, ಇದರಲ್ಲಿ ಎಲ್ಲಿಯೂ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿಲ್ಲ ಎಂದು ಅವರು ವಿವರಣೆ ನೀಡಿದರು.

ಸ್ಥಿರ ದೂರವಾಣಿ ಸಮಸ್ಯೆ: ಜಿಲ್ಲೆಯಾದ್ಯಂತ ಸ್ಥಿರ ದೂರವಾಣಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಚರ್ಚಿಸಬೇಕೆಂದರೆ ಜಿಲ್ಲಾ ದೂರಸಂಪರ್ಕ ಸಲಹಾ ಸಮಿತಿಯ ಸಭೆಗಳನ್ನು ಕರೆಯುತ್ತಿಲ್ಲ ಎಂದು ಅವರು ಆರೋಪಿಸಿದರು.

ಹಿಂದೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದ್ದಾಗ ನಮ್ಮ ಪಕ್ಷದ ಸಂಸದರು ಮೇಲಿಂದ ಮೇಲೆ ದೂರವಾಣಿ ಸಲಹಾ ಸಮಿತಿಯ ಸಭೆಗಳನ್ನು ಕರೆಯುತ್ತಿದ್ದರು ಹಾಗೂ ಸಮಸ್ಯೆಗಳನ್ನು ತತ್‌ಕ್ಷಣವೇ ಬಗೆಹರಿಸಲು ಕ್ರಮಕೈಗೊಳ್ಳುತ್ತಿದ್ದರು ಎಂದು ಅವರು ಹೇಳಿದರು.

ಆದರೆ, ಇಂದಿನ ಕಾಂಗ್ರೆಸ್ ಸಂಸದರಿಗೆ ಸ್ಥಿರ ದೂರವಾಣಿ ಗ್ರಾಹಕರ ಸಮಸ್ಯೆಗಳ ಬಗ್ಗೆ ಅರಿವು ಇದ್ದಂತಿಲ್ಲ ಎಂದು ವ್ಯಂಗ್ಯವಾಡಿದರು.

ಮುಂದಿನ ಒಂದು ತಿಂಗಳೊಳಗಾಗಿ ದೂರವಾಣಿ ಸಂಪರ್ಕವನ್ನು ಮತ್ತು ಅಡುಗೆ ಅನಿಲ ಸರಬರಾಜನ್ನು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಶೀಘ್ರದಲ್ಲೇ ಬಗೆಹರಿಸದಿದ್ದಲ್ಲಿ ದೂರವಾಣಿ ಸಂಪರ್ಕ ಕೇಂದ್ರಕ್ಕೆ ಮತ್ತು ಅಡುಗೆ ಅನಿಲ ಸರಬರಾಜು ಮಾಡುವ ಏಜೆನ್ಸಿಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಕುಟ್ಟ ತಾಲ್ಲೂಕು ಪಂಚಾಯಿತಿ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯು ಭಾರಿ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಅಕ್ರಮ-ಸಕ್ರಮ ಅಧ್ಯಕ್ಷ ನಾಪಂಡ ಕಾಳಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿಯ ಸದಸ್ಯ ರಾಬಿನ್ ದೇವಯ್ಯ, ನಗರ ಬಿಜೆಪಿ ಅಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಜಿಲ್ ಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.