ಕುಶಾಲನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪುರಸಭೆ ಕಟ್ಟಡವನ್ನು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಿದರು. ಶಾಸಕ ಡಾ.ಮಂತರ್ ಗೌಡ, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಭಾಗವಹಿಸಿದ್ದರು
ಕುಶಾಲನಗರ: ‘ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಮಂತರ್ ಗೌಡ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹50 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದು, ಪೌರಾಡಳಿತ ಇಲಾಖೆ ವತಿಯಿಂದಲೂ ಅಗತ್ಯ ಅನುದಾನ ನೀಡಲಾಗುವುದು’ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಭರವಸೆ ನೀಡಿದರು.
ಪಟ್ಟಣದ ಹೃದಯ ಭಾಗದಲ್ಲಿ ₹7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಪುರಸಭೆ ಕಟ್ಟಡವನ್ನು ಬುಧವಾರ ಸಚಿವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.
‘ಕೊಡಗು ಜಿಲ್ಲೆಗೆ ಮೂರು ಇಂದಿರಾ ಕ್ಯಾಂಟಿನ್ ಗಳನ್ನು ನೀಡಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು’ ಎಂದರು.
ಶಾಸಕ ಡಾ.ಮಂತರ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಳೆದ ಏಳು ವರ್ಷಗಳಿಂದ ಕುಂಟುತ್ತ ಸಾಗುತ್ತಿದ್ದ ಪುರಸಭೆ ಕಟ್ಟಡಕ್ಕೆ ₹2 ಕೋಟಿ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಿ ಇಂದು ಸಚಿವರಿಂದ ಉದ್ಘಾಟಿಸಲಾಗಿದೆ.ಅದೇ ರೀತಿ ಇಂದಿರಾ ಕ್ಯಾಂಟಿನ್ ತಂದು ಬಡವರ ಹಸಿವು ನೀಗಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ಅವರ ಪುತ್ಥಳಿಯನ್ನು ಪುರಸಭೆ ಆವರಣದಲ್ಲಿ ಸ್ಥಾಪಿಸಲು ಚಿಂತನೆ ಮಾಡಲಾಗಿದ್ದು, ಅಗತ್ಯ ಸಹಕಾರ ನೀಡಬೇಕು’ ಎಂದು ಸಚಿವರಲ್ಲಿ ಮನವಿ ಮಾಡಿದರು.
‘ಇದೀಗ ಪುರಸಭೆ ವ್ಯಾಪ್ತಿಗೆ ಗುಡ್ಡೆಹೊಸೂರು, ಮುಳ್ಳುಸೋಗೆ ಸೇರ್ಪಡೆಯಾಗಿ 23 ಸದಸ್ಯರನ್ನು ಹೊಂದಿದೆ. ಕುಶಾಲನಗರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಸಹಕಾರ ನೀಡಬೇಕು’ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಕುಶಾಲನಗರದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ಅವರ ದೂರದೃಷ್ಟಿಯೇ ಕಾರಣ’ ಎಂದರು.
ಪುರಸಭೆ ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ‘ಪುರಸಭೆ ತನ್ನ ತೆರಿಗೆ ಹಣದಿಂದ ಹೊಸ ಕಟ್ಟಡ ನಿರ್ಮಾಣ ಮಾಡಿದೆ.ಅದೇ ರೀತಿ 9,11 ಬಿ ಫಾರಂ ನೀಡುವಾಗ ಅನಾಧಿಕೃತ ನಿವೇಶನಗಳಿಗೆ ಅಧಿಕೃತ ಬಿಫಾರಂ ಕೊಡಲು ಕ್ರಮ ಕೈಗೊಳ್ಳಬೇಕು.
ಕಲಾಭವನ, ಗೃಹ ಭಾಗ್ಯ, ಹೌಸಿಂಗ್ ಪಾರ್‌ಆಲ್ ಯೋಜನೆಗೆ ಅನುಮತಿ ನೀಡಬೇಕು’ ಎಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ವೆಂಕಟರಾಜ ಅವರು ಮುಖ್ಯಾಧಿಕಾರಿ ಕಚೇರಿ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ್ಜ ಉತ್ತಪ್ಪ, ಕಾನೂನು ಸಲಹೆಗಾರ ಆರ್.ಕೆ.ನಾಗೇಂದ್ರ ಬಾಬು, ಮುಖಂಡರಾದ ಕೆ.ಪಿ.ಚಂದ್ರಕಲಾ, ಅಧೀಕ್ಷಕ ಎಂಜಿನಿಯರ್ ಬಸವರಾಜು, ಮಡಿಕೇರಿ ಯೋಜನಾ ನಿರ್ದೇಶಕ ಬಿ.ಬಸಪ್ಪ, ಸಚಿವರ ಪಿ.ಎಸ್. ಮುರುಳಿ, ಮುಖ್ಯಾಧಿಕಾರಿ ಗಿರೀಶ್ ಪಾಲ್ಗೊಂಡಿದ್ದರು.
ಸದಸ್ಯರಾದ ಪದ್ಮಾವತಿ ಪ್ರಾರ್ಥನೆ ಹಾಡಿದರು. ಆನಂದ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಗಾಯಿತ್ರಿ ನಿರೂಪಿಸಿದರು. ಪುಷ್ಪ, ಗಾಯಿತ್ರಿ ಸಂಗಡಿಗರು ನಾಡಗೀತೆ ಹಾಡಿದರು. ನಂಜುಂಡಸ್ವಾಮಿ ರೈತ ಗೀತೆ ಹಾಡಿದರು.
ಕುಶಾಲನಗರ ಪುರಸಭೆ ಆಡಳಿತ ಸ್ವಂತ ಅನುದಾನದಿಂದ ನೂತನ ಪುರಸಭೆ ಕಟ್ಟಡ ಕಟ್ಟಿರುವುದು ತುಂಬ ಸಂತೋಷ ತಂದಿದೆ.ಇದು ರಾಜ್ಯಕ್ಕೆ ಮಾದರಿಯಾಗಿದೆ.–ರಹೀಂ ಖಾನ್, ಪೌರಾಡಳಿತ ಮತ್ತು ಹಜ್ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.