
ಮಡಿಕೇರಿ: ಮೈಸೂರಿನಲ್ಲಿ ಆ. 30ರಂದು ನಡೆಯಲಿರುವ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಿಂದ 5,150 ಮಂದಿ ಭಾಗಿಯಾಗಲಿದ್ದಾರೆ.
ಜಿಲ್ಲೆಯಲ್ಲಿ ಈ ಯೋಜನೆಯಡಿ ನೋಂದಣಿಗೆ 1,31,863 ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ 1,05,122 ಮಂದಿ ನೋಂದಣಿಯಾಗಿದ್ದು, ಶೇ 81.14 ರಷ್ಟು ಸಾಧನೆ ಮಾಡಲಾಗಿದೆ. ಇವರಲ್ಲಿ 5,150 ಮಂದಿಯನ್ನು ಮೈಸೂರಿನ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿದೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ನಡೆಸಿದ ಸಭೆಯಲ್ಲಿ ಈ ಮಾಹಿತಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಹಂಚಿಕೊಂಡರು.
‘ಈ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆದುಕೊಂಡು ಹೋಗಲು ನೋಡಲ್ ಅಧಿಕಾರಿಗಳಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಕಾರ್ಯದರ್ಶಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೆಎಸ್‍ಆರ್‌ಟಿಸಿ ಬಸ್‍ಗಳು ಆಯಾಯ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಹೊರಡಲಿದೆ. ಪ್ರತೀ ಬಸ್‍ಗೆ ಕನಿಷ್ಠ 50 ಮಂದಿಯಂತೆ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಜಿಲ್ಲೆಯಿಂದ 5,150 ಮಂದಿ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕ ನಟರಾಜ ಮಾತನಾಡಿ, ‘ಮಡಿಕೇರಿ ತಾಲ್ಲೂಕಿನಿಂದ 1,300 ಮಂದಿ, ಸೋಮವಾರಪೇಟೆ ತಾಲ್ಲೂಕಿನಿಂದ 1,150, ಕುಶಾಲನಗರ ತಾಲ್ಲೂಕಿನಿಂದ 800, ಪೊನ್ನಂಪೇಟೆ ತಾಲ್ಲೂಕಿನಿಂದ 1,050, ವಿರಾಜಪೇಟೆ ತಾಲ್ಲೂಕಿನಿಂದ 850’ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂದರು.
ಸಚಿವ ಎನ್.ಎಸ್.ಭೋಸರಾಜು ಪ್ರತಿಕ್ರಿಯಿಸಿ, ‘ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಫಲಾನುಭವಿಗಳಿಗೆ ಕಲ್ಪಿಸಬೇಕು. ಸಮರ್ಪಕವಾದ ಕುಡಿಯುವ ನೀರು ಒದಗಿಸಬೇಕು. ಯಾವುದೇ ರೀತಿ ತೊಂದರೆಯಾಗದಂತೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರಬೇಕು. ಪ್ರತೀ ಬಸ್‍ನಲ್ಲಿ 50 ಮಂದಿಯ ವಾಟ್ಸ್‌ಆ್ಯಪ್ ಗ್ರೂಪ್‍ನ್ನು ಮಾಡಿಕೊಂಡು ಸಮನ್ವಯತೆ ಸಾಧಿಸಿ ಸುರಕ್ಷಿತವಾಗಿ ವಾಪಸ್ ಕರೆತರಬೇಕು’ ಎಂದು ಸೂಚನೆ ನೀಡಿದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಗೃಹಲಕ್ಷ್ಮಿ’ ಯೋಜನೆಯು ಸರ್ಕಾರದ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಸರ್ಕಾರದ ಯೋಜನೆ ಪ್ರತೀ ಬಡವರಿಗೂ ತಲುಪಬೇಕು. ಬಡವರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರಬೇಕು. ಗ್ರಾಮ ಪಂಚಾಯಿತಿಯ ಜತೆಗೆ ಮಡಿಕೇರಿ ನಗರ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪ್ರದೇಶಗಳಿಂದಲೂ ಬಸ್ ವ್ಯವಸ್ಥೆ ಮಾಡಬೇಕು’ ಸಲಹೆ ನೀಡಿದರು.
ಕಾರ್ಯಕ್ರಮಕ್ಕಾಗಿ ಕರೆದುಕೊಂಡು ಹೋಗುವ ಫಲಾನುಭವಿಗಳಿಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟ, ಕಾಫಿ, ಬಿಸ್ಕೇಟ್, ವಾಟರ್ ಬಾಟಲ್‍ನ್ನು ನೋಡಲ್ ಅಧಿಕಾರಿಗಳು ಒದಗಿಸಲಿದ್ದಾರೆ ಎಂದು ನಟರಾಜ್ ತಿಳಿಸಿದರು.
ಕೆಎಸ್‍ಆರ್‌ಟಿಸಿ ಪುತ್ತೂರು ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರಶೆಟ್ಟಿ ಮಾತನಾಡಿ, ‘ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕದಲ್ಲಿ 60 ಬಸ್‍ಗಳಿದ್ದು, ಜೊತೆಗೆ ಪುತ್ತೂರು ಮತ್ತಿತರ ಡಿಪೋಗಳಿಂದ 40ಕ್ಕೂ ಹೆಚ್ಚು ಬಸ್‍ಗಳನ್ನು ಪಡೆದು ಒಟ್ಟು 103 ಗ್ರಾಮ ಪಂಚಾಯಿತಿಗಳಿಗೆ ಬಸ್‍ನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇದ್ದರು.
ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳಿಗೆ ಬಸ್ ನಿಯೋಜನೆ ಪ್ರತಿ ಬಸ್‌ನ ವಾಟ್ಸ್‌ಆ್ಯಪ್ ಗ್ರೂಪ್ ರಚಿಸುವಂತೆ ಸಲಹೆ ಎಲ್ಲರಿಗೂ ಉಪಾಹಾರ, ಭೋಜನದ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.