ADVERTISEMENT

ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ

ಫೇಸ್‌ಬುಕ್‌ನಲ್ಲಿ ಪ್ರೀತಿಸಿದ ಯುವಕನೊಂದಿಗೆ ಗೃಹಿಣಿ ಜೈಲು ಪಾಲು

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 8:47 IST
Last Updated 4 ಜನವರಿ 2018, 8:47 IST

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕು ಮಾದಾಪುರದ ಇಗ್ಗೊಡ್ಲು ಗ್ರಾಮದ ಕಾಳಚಂಡ ರಂಜು ಪೂವಯ್ಯ ಅವರ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಲು ಯಶಸ್ವಿ ಆಗಿದ್ದಾರೆ.

ಕೊಲೆಯಾದ ರಂಜು ಪೂವಯ್ಯ ಅವರ ಪತ್ನಿ ಶಾಂತಿ ಪೂವಯ್ಯ (36), ವಿರಾಜಪೇಟೆ ತಾಲ್ಲೂಕು ಚಂಬೇಬೆಳ್ಳೂರು ಗ್ರಾಮದ ಮಂಡೇಪಂಡ ರಾಜೇಶ್‌ (40), ಅದೇ ಗ್ರಾಮದ ಮಂಡೇಪಂಡ ಅಶೋಕ್‌ (44) ಬಂಧಿತ ಆರೋಪಿಗಳು.

‘ರಾಜೇಶ್‌ 9ನೇ ತರಗತಿ ತನಕ ವ್ಯಾಸಂಗ ಮಾಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದ. 2012ರಲ್ಲಿ ಪ್ರಕರಣವೊಂದರಲ್ಲಿ ನ್ಯಾಯಾಲಯವು 7 ವರ್ಷ ಶಿಕ್ಷೆ ವಿಧಿಸಿತ್ತು. ಜಾಮೀನಿನ ಮೇಲೆ ಹೊರಗಿದ್ದ. ಮತ್ತೊಬ್ಬ ಆರೋಪಿ ಅಶೋಕ್‌ 8ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿದ್ದು, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಹಾಗೂ ಕೊಲೆ ಬೆದರಿಕೆ ಪ್ರಕರಣದ ಆರೋಪಿಯಾಗಿದ್ದ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

ADVERTISEMENT

ಬಂಧಿತರಿಂದ ಮೊಬೈಲ್‌, ದ್ವಿಚಕ್ರ ವಾಹನ ಹಾಗೂ ಕೊಲೆಗೆ ಬಳಸಿದ ಎಸ್‌ಬಿಬಿಎಲ್‌ ಕೋವಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸಂಚು ರೂಪಿಸಿದ್ದು ಹೇಗೆ?: ‘ರಂಜು ಪೂವಯ್ಯ ಅವರ ಪತ್ನಿ ಶಾಂತಿ ಹಾಗೂ ರಾಜೇಶ್‌ ಅವರು ಫೇಸ್‌ಬುಕ್‌ ಮೂಲಕ ಪರಿಚಯಸ್ಥರು. ಮೂರು ತಿಂಗಳ ಬಳಿಕ ಫೇಸ್‌ಬುಕ್‌ನ ಪರಿಚಯ ಪ್ರೀತಿಗೆ ತಿರುಗಿತ್ತು. ಪತಿ, ನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ನನಗೆ ಹಾಗೂ ಮಕ್ಕಳಿಗೆ ಕಿರುಕುಳ ನೀಡುವುದು, ಥಳಿಸುವುದು ಮಾಡುತ್ತಾನೆ.

ಪತಿಯನ್ನು ಕೊಲೆ ಮಾಡುವಂತೆ ರಾಜೇಶ್‌ ಬಳಿ ಕೇಳಿಕೊಂಡಿದ್ದಳು. ಅದಕ್ಕೆ ರಾಜೇಶ್‌ ₹ 2.50 ಲಕ್ಷ ಹಣ ಕೇಳಿದ್ದ. ಪತಿಯ ಬ್ಯಾಂಕ್‌ ಖಾತೆಯಲ್ಲಿ ಸ್ವಲ್ಪ ಹಣವಿದ್ದು, ಅದರೊಟ್ಟಿಗೆ ನನ್ನ ಚಿನ್ನಾಭರಣ ಮಾರಾಟ ಮಾಡಿ ₹ 1.50 ಲಕ್ಷ ನೀಡುವುದಾಗಿ ಸುಪಾರಿ ನೀಡಿದ್ದಳು’ ಎಂದು ಎಸ್‌ಪಿ ಮಾಹಿತಿ ನೀಡಿದರು.

‘ಇಬ್ಬರೂ ಅಶೋಕ್‌ಗೆ ಕೊಲೆ ಮಾಡುವಂತೆ ತಿಳಿಸಿದ್ದರು. ಡಿ. 23ರಂದು ಬೆಳಿಗ್ಗೆ 5ರ ಸುಮಾರಿಗೆ ಮನೆಯಿಂದ ರಂಜು ಪೂವಯ್ಯ ಹೊರಬರುವಾಗ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು’ ಎಂದು ಎಸ್‌ಪಿ ಘಟನೆ ವಿವರಿಸಿದರು.

ಕೊಲೆ ಪ್ರಕರಣ ಭೇದಿಸಲು ಸೋಮವಾರಪೇಟೆ ಇನ್‌ಸ್ಪೆಕ್ಟರ್‌ ಹಾಗೂ ಡಿಸಿಐಬಿ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ತನಿಖಾಧಿಕಾರಿಗಳು ಶಾಂತಿ ಬಳಸುತ್ತಿದ್ದ ಮೊಬೈಲ್‌ ಸಂಖ್ಯೆ ಪಡೆದು ಪರಿಶೀಲಿಸಿದಾಗ ಇಡೀ ಕೃತ್ಯ ಬೆಳಕಿಗೆ ಬಂತು ಎಂದು ಹೇಳಿದರು.

ಡಿಸಿಐಬಿ ಇನ್‌ಸ್ಪೆಕ್ಟರ್‌ ಎಂ. ಮಹೇಶ್‌, ಎಎಸ್‌ಐಗಳಾದ ಕೆ.ವೈ. ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿ ಬಿ.ಎಲ್‌. ಯೋಗೇಶ್‌ ಕುಮಾರ್‌, ಎಂ.ಎನ್‌. ನಿರಂಜನ್‌, ಕೆ.ಎಸ್‌. ಅನಿಲ್‌, ವಿ.ಜಿ. ವೆಂಕಟೇಶ್‌, ಕೆ.ಆರ್‌. ವಸಂತ, ಎಂ.ಬಿ. ಸುಮತಿ, ಯು.ಎ. ಮಹೇಶ್‌, ಸಿ.ಕೆ. ರಾಜೇಶ್, ಎಂ.ಎ. ಗಿರೀಶ್‌ ಹಾಗೂ ಚಾಲಕರಾದ ಕೆ.ಎಸ್‌. ಶಶಿಕುಮಾರ್, ಶೇಷಪ್ಪ ತನಿಖಾ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.