ADVERTISEMENT

ನಾಣಯ್ಯ ಸೇರ್ಪಡೆಗೆ ಕಾಂಗ್ರೆಸ್‌ನಲ್ಲೇ ಭಿನ್ನ ಧ್ವನಿ

ಅದಿತ್ಯ ಕೆ.ಎ.
Published 28 ಜನವರಿ 2018, 8:49 IST
Last Updated 28 ಜನವರಿ 2018, 8:49 IST
ಎಂ.ಸಿ. ನಾಣಯ್ಯ
ಎಂ.ಸಿ. ನಾಣಯ್ಯ   

ಮಡಿಕೇರಿ: ಮಾಜಿ ಸಚಿವ, ಜೆಡಿಎಸ್‌ ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಅವರನ್ನು ಪಕ್ಷಕ್ಕೆ ಕರೆತರುವ ವಿಚಾರದಲ್ಲಿ ಕೊಡಗು ಕಾಂಗ್ರೆಸ್‌ನಲ್ಲೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ನಾಣಯ್ಯ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್‌ ತೊರೆಯಲು ಮುಂದಾಗಿದ್ದು ಕಾಂಗ್ರೆಸ್‌ ಸೇರುವ ವದಂತಿ ಬಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಾಣಯ್ಯ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ಮಾಡಿದ್ದರೂ ಪಕ್ಷದ ಜಿಲ್ಲಾ ಘಟಕದಲ್ಲಿ ಮಾತ್ರ ವಿಭಿನ್ನ ಬೆಳವಣಿಗೆಗಳು ನಡೆಯುತ್ತಿವೆ.

‘ಒಂದು ವರ್ಷದಿಂದ ಜೆಡಿಎಸ್‌ ಪಕ್ಷದ ಸಕ್ರಿಯ ಚಟುವಟಿಕೆಯಿಂದ ಹಿಂದೆ ಸರಿದಿರುವ ನಾಣಯ್ಯ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಕರೆತಂದರೆ ಜಿಲ್ಲೆಯ ಮಟ್ಟಿಗೆ ಏನು ಪ್ರಯೋಜನ’ ಎಂಬ ಪ್ರಶ್ನೆಯನ್ನು ಕಾಂಗ್ರೆಸ್‌ನ ರಾಜ್ಯ ನಾಯಕರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ADVERTISEMENT

ಈ ಹಿರಿಯನ್ನು ಕಾಂಗ್ರೆಸ್‌ಗೆ ಕರೆತಂದರೆ ರಾಜ್ಯಮಟ್ಟದಲ್ಲಿ ಅನುಕೂಲವಾಗಲಿದೆ ಎಂಬ ಆಲೋಚನೆ ಸಿದ್ದರಾಮಯ್ಯ ಅವರದ್ದು. ಅದೇ ಕಾರಣಕ್ಕೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಸಿದ್ದರಾಮಯ್ಯ ಜ. 8ರಂದು ನಗರದ ಅವರ ನಿವಾಸಕ್ಕೆ ತೆರಳಿ ರಹಸ್ಯ ಮಾತುಕತೆ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ವಕೀಲ ಚಂದ್ರಮೌಳಿ, ಸಚಿವರ ಆಪ್ತ ಸಹಾಯಕ ಹರೀಶ್‌ ಬೋಪಣ್ಣ ಸಹ ಜೊತೆಗಿದ್ದರು. ಆದರೆ, ನಾಣಯ್ಯ ಸೇರ್ಪಡೆಗೆ ವಿರೋಧಿಸುತ್ತಿರುವ ಕೆಲವು ಸ್ಥಳೀಯ ಮುಖಂಡರು ತೆರಳಿರಲಿಲ್ಲ.

ನಾಣಯ್ಯ ಬೆಂಬಲಿಗರು ಎರಡ್ಮೂರು ಸಭೆ ನಡೆಸಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೆ, ಜಿಲ್ಲಾ ಕಾಂಗ್ರೆಸ್‌ ಮುಖಂಡರು ಮಾತ್ರ ಪಕ್ಷಕ್ಕೆ ಕರೆತರುವ ಗಂಭೀರ ಚಿಂತನೆ ನಡೆಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ನಾಣಯ್ಯ ನಡೆ ಕುತೂಹಲ ಮೂಡಿಸಿದೆ. ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸಭೆ ನಡೆಯಲಿದ್ದು ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜನತಾದಳದ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಹಾಗೂ ನಾಣಯ್ಯ ಒಟ್ಟಿಗೆ ಸಂಪುಟದಲ್ಲಿ ಕೆಲಸ ಮಾಡಿದವರು. ಇಬ್ಬರ ನಡುವೆ ಉತ್ತಮ ಗೆಳೆತನವಿದ್ದು, ಅವರನ್ನು ಕಾಂಗ್ರೆಸ್‌ಗೆ ಕರೆತಂದರೆ ಬಿಜೆಪಿ ಹಿಡಿತದಲ್ಲಿರುವ ಕೊಡಗಿನಲ್ಲಿ ಪಕ್ಷಕ್ಕೆ ಶಕ್ತಿ ಬರಲಿದೆ ಎಂಬ ಆಲೋಚನೆ ವರಿಷ್ಠರದ್ದು.

ಮುಖಂಡರ ಮೇಲೆ ಮುನಿಸು: ಜೆಡಿಎಸ್‌ ವರಿಷ್ಠರ ನಡೆಯಿಂದ ಬೇಸತ್ತು ವರ್ಷದಿಂದ ಯಾವುದೇ ಚಟುವಟಿಕೆಯಲ್ಲಿ ನಾಣಯ್ಯ ಸಕ್ರಿಯವಾಗಿರಲಿಲ್ಲ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಅವರಲ್ಲಿತ್ತು. ಜೆಡಿಎಸ್‌ನಿಂದ ಮಡಿಕೇರಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ, ಮಾಜಿ ಸಚಿವ ಬಿ.ಎ. ಜೀವಿಜಯ ಹಾಗೂ ಇವರ ನಡುವೆ ವೈಮನಸ್ಸು ಉಂಟಾಗಿತ್ತು. ‘ನಾಣಯ್ಯ ನನ್ನ ಸೋಲಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ಜೀವಿಜಯ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಗೆ ದೂರು ನೀಡಿದ್ದರು. ‘ಭಿನ್ನಮತ ಶಮನ ಮಾಡುವ ಬದಲಿಗೆ ನಾಣಯ್ಯ ಅವರನ್ನೇ ಮೂಲೆಗುಂಪು ಮಾಡಲಾಯಿತು’ ಎಂಬ ಅಸಮಾಧಾನ ಅವರ ಬೆಂಬಲಿಗರಲ್ಲಿದೆ.

ಕಾಂಗ್ರೆಸ್‌ಗೆ ಹೋದರೆ ಅಲ್ಲಿಯೂ ಮೂಲೆಗುಂಪಾಗುವ ಸಾಧ್ಯತೆಯಿದೆ. ಸದ್ಯಕ್ಕೆ ತಟಸ್ಥರಾಗಿರುವ ಕುರಿತೂ ನಾಣಯ್ಯ ಬೆಂಬಲಿಗರು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

* * 

ಬೆಂಬಲಿಗರು ನಡೆಸಿದ ಸಭೆಯಲ್ಲಿ ನಾನಿರಲಿಲ್ಲ. ಜೆಡಿಎಸ್‌ ತೊರೆದು ಬೇರೊಂದು ಪಕ್ಷ ಸೇರುವ ನಿರ್ಧಾರವನ್ನು ಮೊದಲು ಅವರು ತೆಗೆದುಕೊಳ್ಳಲಿ; ಬಳಿಕ ನಾನು ತೀರ್ಮಾನಿಸುತ್ತೇನೆ
ಎಂ.ಸಿ. ನಾಣಯ್ಯ,  ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.