ADVERTISEMENT

6 ಕುಟುಂಬಕ್ಕೆ ಮತದಾನದ ಹಕ್ಕು ಇಲ್ಲ!

ಚಿನ್ನೇನಹಳ್ಳಿ ಹಾಡಿಗೆ ಮೂಲಸೌಕರ್ಯ ಮರೀಚಿಕೆ

ರವಿ ಎಸ್.
Published 5 ನವೆಂಬರ್ 2014, 8:50 IST
Last Updated 5 ನವೆಂಬರ್ 2014, 8:50 IST

ಕುಶಾಲನಗರ: ಎಂಟು ದಶಕಗಳಿಂದ ನೆಲೆ ನಿಂತಿದ್ದರೂ ಸರ್ಕಾರದ ಬಹುತೇಕ ಸೌಲಭ್ಯವೂ ದೊರೆತ್ತಿಲ್ಲ. ಚಿನ್ನೇನಹಳ್ಳಿ ಹಾಡಿಯಲ್ಲಿ ರಸ್ತೆ, ಬೀದಿದೀಪ, ಸೂರು ಸೇರಿದಂತೆ ಕನಿಷ್ಠ ಮೂಲ ಸೌಕರ್ಯವಿಲ್ಲದೆ ಇಂದಿಗೂ ಹೀನಾಯ ಸ್ಥಿತಿಯಲ್ಲಿ ಜನರು ಬದುಕು ದೂಡುತ್ತಿದ್ದಾರೆ.

ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಹಾಡಿ ಇಲ್ಲಿಂದ ಐದು ಕಿ.ಮೀ. ದೂರದಲ್ಲಿದೆ. ಕುಶಾಲನಗರದಿಂದ 15 ಕಿ.ಮೀ ದೂರದ ಹಿರಿಕೆರೆ ಬೆಟ್ಟದ ತಪ್ಪಲಿನಲ್ಲಿರುವ ಪುಟ್ಟ ಹಾಡಿಯ 15 ಗುಡಿಸಲುಗಳಲ್ಲಿ 27 ಕುಟುಂಬಗಳು ನಿಕೃಷ್ಟವಾದ ಸ್ಥಿತಿಯಲ್ಲಿ ಬದುಕು ದೂಡುತ್ತಿವೆ.

ಸಂಪೂರ್ಣ ಜೇನುಕುರುಬ ಜನಾಂಗದವರೇ ನೆಲೆಸಿರುವ ಹಾಡಿಯಲ್ಲಿ 80 ವರ್ಷಗಳಿಂದ ಬದುಕು ದೂಡಿರುವುದಕ್ಕೆ ಆಧಾರಗಳಿವೆ ಎನ್ನುತ್ತಾರೆ ಇಲ್ಲಿನ ನಿವಾಸಿ ಬಸಪ್ಪ. ವಿಪರ್ಯಾಸವೆಂದರೆ ಅಂದಿನಿಂದ ಬದುಕುತ್ತಿರುವ ಇವರ ಚಿಕ್ಕ ಗುಡಿಸಲು ಜಾಗಕ್ಕೂ ಹಕ್ಕುಪತ್ರ ನೀಡಿಲ್ಲ. ಸ್ವತಃ ಕಟ್ಟಿಕೊಂಡಿರುವ ಗುಡಿಸಲು ಮುರಿದು ಬೀಳುವ ಸ್ಥಿತಿಯಲ್ಲಿವೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಪೈಸಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡ ಭೂಮಾಲೀಕರಿಗೆ ಹಕ್ಕುಪತ್ರ ನೀಡಿರುವ ಅಧಿಕಾರಿಗಳು, ಬುಡಕಟ್ಟು ಜನರಿಗಾಗಿ ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿದ್ದರೂ ನಾವು ಉತ್ತುಬಿತ್ತುತ್ತಿರುವ ಅರ್ಧ ಮುಕ್ಕಾಲು ಎಕರೆ ಜಾಗಕ್ಕೆ ಯಾವುದೇ ಆಧಾರ ನೀಡಿಲ್ಲವೆಂದು ಆರೋಪಿಸುತ್ತಾರೆ ಹಾಡಿಯ ರೈತರು.

ಆಶ್ಚರ್ಯಕರ ಸಂಗತಿ ಎಂದರೆ ನಾಗೇಶ್‌, ರಮೇಶ್‌, ತಮ್ಮಯ್ಯ, ಗೋಪಾಲ್‌, ಕೃಷ್ಣ ಮತ್ತು ಸಿದ್ಧ ಈ ಆರು ಕುಟುಂಬಗಳಿಗೆ ಹಕ್ಕುಪತ್ರಗಳ ಮಾತಿರಲಿ, ಮತದಾನದ ಚೀಟಿಯನ್ನು ವಿತರಿಸಿಲ್ಲ ಎನ್ನುತ್ತಾರೆ ಬಸಪ್ಪ. ಹೀಗಾಗಿ ಈ ಕುಟುಂಬಗಳು ಸರ್ಕಾರದ ಲೆಕ್ಕದಲ್ಲಿ ಬದುಕೇ ಇಲ್ಲ. ಇಷ್ಟು ಕುಟುಂಬಗಳಿಗೆ ಸರ್ಕಾರದ ಬಿಡಿಗಾಸಿನ ಸೌಲತ್ತುಗಳು ಲಭಿಸಿಲ್ಲ.

ಇಪ್ಪತ್ತೇಳು ಕುಟುಂಬಗಳಿಂದ 20 ಕ್ಕೂ ಹೆಚ್ಚು ಅಂಗನವಾಡಿಗೆ ಹೋಗುವ ಕಂದಮ್ಮಗಳಿವೆ. ಆದರೆ, ಎರಡುವರೆ ಕಿಲೊಮೀಟರ್‌ ದೂರದಲ್ಲಿರುವ ಹಳೆಗೋಟೆಗೆ ಹೋಗಬೇಕಾಗಿರುವುದರಿಂದ ಈ ಮಕ್ಕಳು ಅಂಗನವಾಡಿಯ ಮುಖವನ್ನೇ ನೋಡುತ್ತಿಲ್ಲ.

ಇಪ್ಪತ್ತೇಳು ಕುಟುಂಬಗಳ ಪೈಕಿ 20 ಕುಟುಂಬಗಳಿಗೆ ಮಾತ್ರವೇ ಪಡಿತರ ಚೀಟಿ ನೀಡಲಾಗಿದ್ದು, 15 ಕುಟುಂಬಗಳಿಗೆ ಅಂತ್ಯೋದಯ ಮತ್ತು ಐದು ಕುಟುಂಬಗಳಿಗೆ ಬಿಪಿಎಲ್‌ ಪಡಿತರ ಚೀಟಿ ನೀಡಲಾಗಿದೆ.

ಈ ಹಾಡಿಗೆ ಕಣಿವೆಯಿಂದ ಭುವನಗಿರಿಯ ಮೂಲಕ ಹಾದು ಹಾರಂಗಿ ಎಡದಂಡೆ ನಾಲೆಯನ್ನು ದಾಟಿ ಹೋಗಬೇಕು. ಇಲ್ಲವೇ, ಹೆಬ್ಬಾಲೆಯಿಂದ ಹಳಗೋಟೆ ಮೂಲಕ ತಲುಪಬೇಕು. ಯಾವ ಕಡೆಯಿಂದ ಹೋದರು ಆಟೊ ಆಶ್ರಯಿಸಿ ₨ 80 ಪಾವತಿಸಬೇಕು. ಅರ್ಥಾತ್‌ ಇಂದಿಗೂ ಸಾರಿಗೆ ಸಂಪರ್ಕದ ವ್ಯವಸ್ಥೆಯೇ ಇಲ್ಲವೆಂದು ಬೇರೆ ಹೇಳಬೇಕಿಲ್ಲ.

ಹಾಡಿಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆಯಾಯಿತೆಂದರೆ ದೇವರೇ ಗತಿ. ಸಾರಿಗೆ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಡೆದು ಹೋಗಲು ಕಷ್ಟಪಡಬೇಕಾದ ಸ್ಥಿತಿಯಿದೆ.

ರಾತ್ರಿಯಾಯಿತೆಂದರೆ ಮನೆ ಮುಂದೆ ಬಂದು ಆನೆಗಳು ನಿಲ್ಲುತ್ತವೆಯಾದರೂ ಬಹುತೇಕ ಕಡೆಗಳಲ್ಲಿ ಬೀದಿದೀಪಗಳು ಉರಿಯುವುದಿಲ್ಲ.

ಒಟ್ಟಿನಲ್ಲಿ ಆಧುನಿಕ ಬದುಕಿನಿಂದ ದೂರವಿರುವ ಈ ಹಾಡಿಯ ಜನರು ಕನಿಷ್ಠ ಮೂಲಸೌಕರ್ಯಗಳಿಲ್ಲದೆ ದೂಡುತ್ತಿರುವ ಬದುಕಿನತ್ತ ಇನ್ನಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುವರೆ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.