ADVERTISEMENT

60 ದಿನಗಳ ಒಳಗೆ ರಾಜ್ಯದಲ್ಲಿ ಕ್ರೀಡಾನೀತಿ ಜಾರಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 6:06 IST
Last Updated 22 ಡಿಸೆಂಬರ್ 2012, 6:06 IST

ಸೋಮವಾರಪೇಟೆ: ಮುಂದಿನ 60 ದಿನಗಳ ಒಳಗೆ ರಾಜ್ಯದಲ್ಲಿ ಕ್ರೀಡಾನೀತಿ ಜಾರಿಗೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಭರವಸೆ ನೀಡಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ಶೈಕ್ಷಣಿಕ ಸಮ್ಮೆಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನಿಡುವ ಚಿಂತನೆ ಸರ್ಕಾರದ ಮುಂದಿದೆ. ಯುವಶಕ್ತಿಯನ್ನು ಸದುಪಯೋಗ ಪಡಿಸಿಕೊಂಡು ಶಕ್ತಿಯುತ ರಾಷ್ಟ್ರ ನಿರ್ಮಾಣಕ್ಕೆ ತಯಾರಿ ಮಾಡಲು, ಯುವನೀತಿಯನ್ನು ಜಾರಿಗೆ ತರಲು ಪ್ರಯತ್ನ ನಡೆಯುತ್ತಿದೆ. ತಾಲ್ಲೂಕಿನ ಸರ್ಕಾರಿ ನೌಕರರಿಗೆ ಗಿರಿಭತ್ಯೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ್ ಗುರಿಕಾರ್ ಮಾತನಾಡಿ, ಖಾಸಗಿ, ಅನುದಾನಿತ, ಅನುದಾನರಹಿತ ಎಂಬ ತಾರತಮ್ಯವನ್ನು ಬಿಟ್ಟು ಎಲ್ಲರಿಗೂ ಸಮಾನ ನೀತಿಯಡಿ ಶಿಕ್ಷಣ ದೊರಕಬೇಕು.

ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳನ್ನು ತಂದರೂ, ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಗುಣಾತ್ಮಕ ಶಿಕ್ಷಣದೊಂದಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಸರ್ಕಾರ ಮುಂದಾಗಬೇಕು ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರೆಯೂರು ಸೋಮಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಬಿ. ಧರ್ಮಪ್ಪ, ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಶಿಕ್ಷಕರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಟಿ.ಡಿ. ರಮಾನಂದ, ರಾಜ್ಯ ಸಮಿತಿ ಸದಸ್ಯ ಎಸ್.ಎ. ಯೋಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರರಾಜೇ ಅರಸ್, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಮಹದೇವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಇತರರು ಇದ್ದರು.

ಶೇಖರ್ ಮತ್ತು ತಂಡದವರು ನಾಡಗೀತೆ ಹಾಡಿದರು. ಸಂಘದ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಸ್ವಾಗತಿಸಿದರು. ಪದಾಧಿಕಾರಿಗಳಾದ ಚೇತನ್ ಹಾಗೂ ಗಣೇಶ್ ನಿರೂಪಿಸಿದರು.

ಗಮನ ಸೆಳೆದ ಶೈಕ್ಷಣಿಕ ದಿಬ್ಬಣ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಸಮ್ಮೇಳನ ಅರ್ಥಪೂರ್ಣವಾಗಿ ಮೇಳೈಸಿತು. ಬೆಳಿಗ್ಗೆ ನಗರದ ವಿವೇಕಾನಂದ ವೃತ್ತದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲಾಖೆ ಸಂಯೋಜಕ ಮಣಜೂರು ಮಂಜುನಾಥ್ ನೇತೃತ್ವದಲ್ಲಿ ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ, ಕಲ್ಲಡ್ಕ ಬೊಂಬೆ, ವಾದ್ಯಗೋಷ್ಠಿ ಹಾಗೂ ಛತ್ರಿ ಚಾಮರಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ `ಶೈಕ್ಷಣಿಕ ದಿಬ್ಬಣ' ಮೆರವಣಿಗೆ ನಡೆಯಿತು.

ಸೋಮವಾರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಹಾಕಲಾಗಿದ್ದ ಬೃಹತ್ ಪೆಂಡಾಲ್‌ನ ಬಳಿ ತಾಲ್ಲೂಕಿನ ವಿವಿಧ ಶಾಲಾ ಮಕ್ಕಳು ತಯಾರಿಸಿದ ವಿಜ್ಞಾನ ವಸ್ತುಪ್ರದರ್ಶನವನ್ನು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಉದ್ಘಾಟಿಸಿದರು. ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಿತು.

ಮಧ್ಯಾಹ್ನ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅನಂತನಾಯ್ಕ `ಸರ್ಕಾರಿ ಶಾಲೆಗಳ ಸಬಲೀಕರಣ' ಎಂಬ ವಿಷಯ ಮಂಡಿಸಿದರು. ಮಧ್ಯಾಹ್ನ ನೆರೆದಿದ್ದವರಿಗೆ ರುಚಿಕಟ್ಟಾದ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.