ಮಡಿಕೇರಿ: ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು, ಆರ್ಥಿಕ ಸ್ಥಿತಿಗತಿ, ಮೂಲ ಸೌಕರ್ಯ ಹಾಗೂ ಸೇವೆ ಒದಗಿಸುವಲ್ಲಿ ತಾಂತ್ರಿಕ ಕೌಶಲ ಮತ್ತಿತರ ಅಧ್ಯಯನ ಸಂಬಂಧ ಸೋಮವಾರ ನಡೆದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಸಾಲು ಸಾಲು ಕೊರತೆಗಳೇ ಪ್ರತಿಧ್ವನಿಸಿದವು.
ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹುದ್ದೆಗಳ ಕೊರತೆ ಬಗ್ಗೆ ಇಲ್ಲಿನ ಅಧಿಕಾರಿಗಳು ಪ್ರಸ್ತಾಪಿಸಿ ಗಮನ ಸೆಳೆದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಜೀವಲ್ ಖಾನ್ ಮಾತನಾಡಿ, ‘ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಮಂಜೂರಾದ 108 ಹುದ್ದೆಗಳಲ್ಲಿ 12 ಭರ್ತಿಯಾಗಿದ್ದು, 97 ಹುದ್ದೆಗಳು ಖಾಲಿ ಇವೆ’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಮಡಿಕೇರಿ ತಾಲ್ಲೂಕಿನಲ್ಲಿ ಮಂಜೂರಾದ 23 ಹುದ್ದೆಗಳಲ್ಲಿ ಒಂದು ಹುದ್ದೆ ಮಾತ್ರ ಭರ್ತಿಯಾಗಿದ್ದು, 22 ಹುದ್ದೆಗಳು ಖಾಲಿ ಇವೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 23 ಹುದ್ದೆಗಳಲ್ಲಿ 4 ಹುದ್ದೆಗಳು ಭರ್ತಿಯಾಗಿದ್ದು, 19 ಹುದ್ದೆಗಳು ಖಾಲಿ ಉಳಿದಿವೆ. ಕುಶಾಲನಗರ ತಾಲ್ಲೂಕಿಗೆ ಸಂಬಂಧಿಸಿದಂತೆ ಮಂಜೂರಾದ 12 ಹುದ್ದೆಗಳಿಗೆ 12 ಹುದ್ದೆಗಳೂ ಖಾಲಿ ಇವೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಮಂಜೂರಾದ 26 ಹುದ್ದೆಗಳಲ್ಲಿ 3 ಹುದ್ದೆಗಳು ಭರ್ತಿಯಾಗಿದ್ದು, 23 ಹುದ್ದೆಗಳು ಖಾಲಿ ಇವೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ 12 ಮಂಜೂರಾದ ಹುದ್ದೆಗಳಲ್ಲಿ 12 ಖಾಲಿ ಇವೆ. ಒಟ್ಟಾರೆ 96 ಹುದ್ದೆಗಳಲ್ಲಿ 8 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 88 ಹುದ್ದೆಗಳು ಖಾಲಿ ಇವೆ’ ಎಂದು ಮಾಹಿತಿ ನೀಡಿದರು.
ಕಾಯಂ ಸಿಬ್ಬಂದಿ ನೇಮಿಸಿ: ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಆದಾಯ ತೆರಿಗೆ ಸಂಗ್ರಹ ಸೇರಿದಂತೆ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ಆದಾಯ ತೆರಿಗೆ ಸಮರ್ಪಕ ನಿರ್ವಹಣೆಗೆ ಕಾಯಂ ಸಿಬ್ಬಂದಿ ನೇಮಿಸಬೇಕು’ ಎಂದು ಸಲಹೆ ನೀಡಿದರು.
ಇದಕ್ಕೆ ದನಿಗೂಡಿಸಿದ ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ‘ಕಾಯಂ ನೌಕರರನ್ನು ನೇಮಕ ಮಾಡಬೇಕು. ಡಾಟಾ ಆಪರೇಟರ್‌ಗಳು ಅರ್ಧದಲ್ಲಿಯೇ ಕೆಲಸ ಬಿಡಲಿದ್ದು, ಸ್ಥಳೀಯ ಕಾಯಂ ಸಿಬ್ಬಂದಿಯನ್ನು ನಿಯೋಜಿಸಬೇಕು. ವೇತನ ಹೆಚ್ಚಿಸಬೇಕು’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಯೊಬ್ಬರು ಮಾತನಾಡಿ, ‘ಹೆಚ್ಚಿನ ಅನುದಾನ ಬಿಡುಗಡೆ ಮಾಡಿದಲ್ಲಿ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ‘ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಶೇ 50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಬೇಕು. ಜೊತೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಹಾಗೆಯೇ ಸ್ಥಳೀಯವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಸಲಹೆ ನೀಡಿದರು.
ರಾಜ್ಯ 5ನೇ ಹಣಕಾಸು ಆಯೋಗದ ಸದಸ್ಯ ಆರ್.ಎಸ್.ಪೋಂಡೆ, ಮಹಮ್ಮದ್ ಸನಾವುಲ್ಲಾ, ಕೆಂಪೇಗೌಡ, ಕೆ.ಯಾಲಕ್ಕಿಗೌಡ, ಸುಪ್ರಸನ್ನ ಮಾತನಾಡಿ, ‘ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಚಟುವಟಿಕೆ, ಆರ್ಥಿಕ ಸ್ಥಿತಿಗತಿ, ಸಂಪನ್ಮೂಲ ಕ್ರೋಡೀಕರಣ ಹಂಚಿಕೆ ಸಂಬಂಧ ಸಮರ್ಪಕ ಮಾಹಿತಿ ಒದಗಿಸಬೇಕು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಪೌರಾಯುಕ್ತರು, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಸಭೆಯಲ್ಲಿದ್ದರು.
ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹ ಕಾಯಂ ಸಿಬ್ಬಂದಿ ನೇಮಕಾತಿಗೆ ಮನವಿ ಹಲವು ಕೊರತೆಗಳನ್ನು ಮುಂದಿಟ್ಟ ಅಧಿಕಾರಿಗಳು
‘ಲಭ್ಯ ಸಂಪನ್ಮೂಲವನ್ನು ಸರಿಯಾಗಿ ಬಳಸಿ’ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ ‘ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಮುಂದಾಗಬೇಕು’ ಎಂದು ಸೂಚಿಸಿದರು. ‘ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಲಭ್ಯವಿರುವ ಸಂಪನ್ಮೂಲವನ್ನು ಕ್ರೋಡೀಕರಿಸಿ ಅಗತ್ಯ ಸೇವೆಗಳನ್ನು ಕಲ್ಪಿಸಬೇಕು’ ಎಂದರು. ‘ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಅತೀ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಆದಾಯ ತೆರಿಗೆ ಸಂಗ್ರಹ ಮೂಲ ಸೌಕರ್ಯಕ್ಕೆ ಒತ್ತು ನೀಡುವುದು ಕುಡಿಯುವ ನೀರು ವಿದ್ಯುತ್ ಪೂರೈಕೆ ಜೊತೆಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವುದು ಹಾಗೆಯೇ ಗ್ರಾಮೀಣಾಭಿವೃದ್ಧಿ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗೆ ಪೂರಕವಾಗಿ ಕಾರ್ಯಕ್ರಮ ರೂಪಿಸಬೇಕು’ ಎಂದು ಹೇಳಿದರು. ‘ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಜವಾಬ್ದಾರಿಗಳಿದ್ದು ಆ ನಿಟ್ಟಿನಲ್ಲಿಯೂ ಹೆಚ್ಚಿನ ಗಮನಹರಿಸಬೇಕು’ ಎಂದು ಸೂಚಿಸಿದರು.
ಕೊಡಗಿನ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಖಾಲಿ ಹುದ್ದೆಗಳು ಸ್ಥಳೀಯ ಸಂಸ್ಥೆ;ಮಂಜೂರಾದ ಹುದ್ದೆಗಳು;ಖಾಲಿ ಇರುವ ಹುದ್ದೆಗಳು ಜಿಲ್ಲಾ ಪಂಚಾಯಿತಿ;108;97 ಮಡಿಕೇರಿ ತಾಲ್ಲೂಕು; 23;22 ಸೋಮವಾರಪೇಟೆ ತಾಲ್ಲೂಕು;23;19 ಕುಶಾಲನಗರ ತಾಲ್ಲೂಕು;12;12 ವಿರಾಜಪೇಟೆ ತಾಲ್ಲೂಕು;26;23 ಪೊನ್ನಂಪೇಟೆ ತಾಲ್ಲೂಕು;12;12
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.