ಸುಂಟಿಕೊಪ್ಪ: ಸೌರಮಾನ ಯುಗಾದಿ ಸಂದರ್ಭದಲ್ಲಿ ಹೊಸ ವರ್ಷವನ್ನು ಸ್ಚಾಗತಿಸುವ ಹಬ್ಬವನ್ನು ಮಲಯಾಳಿ ಭಾಷಿಗರು ವಿಶು ಎಂಬುದಾಗಿ ಆಚರಿಸಿಕೊಂಡರೆ, ತುಳು ಭಾಷಿಗರು ಬಿಸು ಪರ್ಬ ಎಂಬುದಾಗಿ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಿಕೊಂಡರು.
ಇಲ್ಲಿನ ಮಲಯಾಳಿ ಭಾಷಿಗರು ಅಕ್ಕಪಕ್ಕದ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ಶುಭ್ರವಾದ ಹೊಸ ವಸ್ತ್ರ ಧರಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಸುಂಟಿಕೊಪ್ಪದಲ್ಲಿ ನೆಲೆಸಿರುವ ಕೇರಳಿಗರು ತಮ್ಮ ಮನೆಗಳಲ್ಲಿ ಕಣಿ ಇಟ್ಟು ಶ್ರದ್ಧೆಯಿಂದ, ಸಡಗರದಿಂದ ಪೂಜೆ ಸಲ್ಲಿಸುವುದರ ಮೂಲಕ ಹಬ್ಬವನ್ನು ಆಚರಿಸಿಕೊಂಡರು.
ಸೋಮವಾರ ಮುಂಜಾನೆ ಬೇಗನೆ ಎದ್ದು ವಿಶು ಕಣಿಯನ್ನಿಟ್ಟು ಅದರಲ್ಲಿ ವಿವಿಧ ತರಹದ ತರಕಾರಿಗಳು, ತೆಂಗಿನಕಾಯಿ, ಅಕ್ಕಿ, ಹಣ್ಣುಗಳು, ವಿವಿಧ ರೀತಿಯ ತಿಂಡಿ– ತಿನಿಸುಗಳನ್ನು, ಹಣ, ಆಭರಣ ಸೇರಿದಂತೆ ಬೇರೆ ಬೇರೆ ದಿನನಿತ್ಯ ಬಳಕೆಯ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಿ ದೇವರಲ್ಲಿ ಸುಖ, ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸಿದರು.
ಹಬ್ಬದ ಅಂಗವಾಗಿ ಮನೆಗೆ ಬಂದ ಸ್ನೇಹಿತರು, ಬಂಧು– ಬಳಗದವರಿಗೆ, ಅತಿಥಿಗಳಿಗೆ ಅನ್ನ, ಸಾಂಬರು, ಪಚ್ಚಡಿ, ಕಿಚ್ಚಡಿ, ಕಾಳನ್, ಅವೆಲ್, ಉಣ್ಣಿಯಪ್ಪ, ಓಲನ್, ಪಾಯಸ, ತುಪ್ಪ, ಚಿಪ್ಸ್ ಸೇರಿದಂತೆ ಹತ್ತು ಹಲವು ತಿಂಡಿ ತಿನಿಸುಗಳನ್ನು ಮಾಡಿ ಉಣ ಬಡಿಸಿ ಸಂಭ್ರಮಿಸಿದರು.
ಕೇರಳಿಗರು ಮತ್ತು ತುಳು ಭಾಷಿಗರು ಹೊಸ ಬಟ್ಟೆ ಧರಿಸಿದರಲ್ಲದೇ ಮನೆಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ದೀಪ ಹಚ್ಚಿ ಬಂದವರನ್ನು ಸ್ವಾಗತಿಸಿದರು.
ಈಗಾಗಲೇ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಸಿಕ್ಕಿದರಿಂದ ಕೇರಳ, ದಕ್ಷಿಣ ಕನ್ನಡ ಜಿಲ್ಲೆಯ ನೆಂಟರಿಷ್ಟರು, ಸ್ನೇಹಿತರು ಬಂದು ಹಬ್ಬದ ಜೊತೆಗೆ ಪ್ರವಾಸ ಮಾಡಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.