ADVERTISEMENT

ವಸಂತದಲ್ಲಿ ಕಾಣುವುದು ಕೊಡಗಿನಲ್ಲಿ ತಾರೆಗಳ ತೋಟ!

ಆಕಾಶ ಕಾಯಗಳ ವೀಕ್ಷಣೆಗೆ ಬೇಸಿಗೆಯೇ ಪ್ರಸಕ್ತ, ಖಗೋಳಾಸಕ್ತರನ್ನು ಸೆಳೆದಿದೆ ಕಾಫಿನಾಡಿನ ಬೆಟ್ಟಗಳು

ಕೆ.ಎಸ್.ಗಿರೀಶ್
Published 16 ಮೇ 2025, 6:19 IST
Last Updated 16 ಮೇ 2025, 6:19 IST
ಕೊಡಗಿನಲ್ಲಿ ಈಚೆಗೆ ನಕ್ಷತ್ರ ವೀಕ್ಷಣೆಗೆ ಟೆಲಿಸ್ಕೋಪ್‌ಗಳನ್ನು ಅಳವಡಿಸುತ್ತಿರುವುದು  ಚಿತ್ರ: ವಿನಯ್ ಗಣೇಶ್.
ಕೊಡಗಿನಲ್ಲಿ ಈಚೆಗೆ ನಕ್ಷತ್ರ ವೀಕ್ಷಣೆಗೆ ಟೆಲಿಸ್ಕೋಪ್‌ಗಳನ್ನು ಅಳವಡಿಸುತ್ತಿರುವುದು  ಚಿತ್ರ: ವಿನಯ್ ಗಣೇಶ್.   

ಮಡಿಕೇರಿ: ಕೊಡಗು ಎಂದರೆ ಕೇವಲ ಕಾಫಿನಾಡು, ಬೆಟ್ಟಗುಡ್ಡಗಳ ನಾಡು, ಮಳೆ ಸುರಿಯುವ ತಾಣ, ಜಲಪಾತಗಳ ಊರು, ಪ್ರವಾಸಿಗರ ಸ್ವರ್ಗ ಮಾತ್ರವೇ ಅಲ್ಲ. ಇವೆಲ್ಲದರ ಜೊತೆಗೆ, ಖಗೋಲಾಸಕ್ತರ ಮೆಚ್ಚಿನ ತಾಣವೂ ಹೌದು. ರಾಜ್ಯದ ಬೇರೆ ಯಾವುದೇ ನಗರಗಳಲ್ಲಿ ಕಾಣದ ಆಕಾಶಕಾಯಗಳು ಇಲ್ಲಿ ಕಾಣುತ್ತವೆ. ಅದೂ ವಸಂತ ಋತುವಿನಲ್ಲಿ!

ಬೇಸಿಗೆಯಲ್ಲಿ ಆಕಾಶ ವೀಕ್ಷಣೆಗೆ ಕೊಡಗು ಹೇಳಿ ಮಾಡಿಸಿದ ಜಿಲ್ಲೆ ಎಂಬುದು ಖಗೋಳಾಸಕ್ತರಿಗೆ ಗೊತ್ತಿರುವ ವಿಚಾರ. ಪ್ರತಿ ವರ್ಷ ಬೇಸಿಗೆಯಲ್ಲಿ ಅಪಾರ ಸಂಖ್ಯೆಯ ಖಗೋಳಾಸಕ್ತರು ಇಲ್ಲಿಗೆ ಭೇಟಿ ನೀಡಿ ಆಕಾಶಕಾಯಗಳನ್ನು ಕಣ್ತುಂಬಿಕೊಂಡು ಹೊರಡುತ್ತಾರೆ. ಈ ಸಂಗತಿ ಅರಿತಿರುವ ಕೆಲವು ರೆಸಾರ್ಟ್‌ಗಳು ಟೆಲಿಸ್ಕೋಪ್ ಇರಿಸಿ ‘ಸ್ಟಾರ್‌ ಪಾರ್ಟಿ’ಗಳನ್ನು ಆಯೋಜಿಸಿ, ಖಗೋಳಾಸಕ್ತರನ್ನು ಸೆಳೆಯುತ್ತಿವೆ.

ಬೆಂಗಳೂರು ಅಸ್ಟ್ರಾನಮಿಕಲ್ ಸೊಸೈಟಿ ಎಂಬ ಖಗೋಲಾಸಕ್ತರ ಸಂಘಟನೆ ಪ್ರತಿ ವರ್ಷದಂತೆ ಈ ವರ್ಷವೂ ಕೊಡಗಿಗೆ ಭೇಟಿ ನೀಡಿ ಆಕಾಶಕಾಯಗಳನ್ನು ಟೆಲಿಸ್ಕೋಪ್‌ ಮೂಲಕ ವೀಕ್ಷಿಸಿದೆ.

ADVERTISEMENT

ಡಿಸೆಂಬರ್‌ನಿಂದ ಮಾರ್ಚ್ ತಿಂಗಳವರೆಗೂ ಪ್ರತಿ ಅಮಾವಾಸೆಯ ಸಂದರ್ಭದಲ್ಲಿ 5 ದಿನಗಳ ಕಾಲ ಇಲ್ಲಿನ ಭಾಗಮಂಡಲ ಹಾಗೂ ಆಸುಪಾಸಿನಲ್ಲಿ ತಾವೇ ಟೆಲಿಸ್ಕೋಪ್‌ ತಂದು ಅದರಲ್ಲಿ ಆಕಾಶಕಾಯಗಳನ್ನು ನೂರಾರು ಮಂದಿ ವೀಕ್ಷಿಸಿದ್ದಾರೆ. ಅಮಾವಾಸೆಯಲ್ಲಿ ಚಂದ್ರನ ಬೆಳಕಿಲ್ಲದೇ ಇರುವುದರಿಂದ ಹೆಚ್ಚು ಸ್ಪಷ್ಟವಾಗಿ ನಕ್ಷತ್ರಗಳನ್ನು ವೀಕ್ಷಿಸಬಹುದು. ಹಾಗಾಗಿಯೇ, ಖಗೋಳಾಸಕ್ತರು ಆಕಾಶಕಾಯಗಳ ವೀಕ್ಷಣೆಗೆ ಅಮಾವಾಸೆಯ ಸಂದರ್ಭವನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ.

ಕೊಡಗಿನಲ್ಲಿ ನಮ್ಮ ಗೆಲಾಕ್ಸಿಯಾದ ಆಕಾಶಗಂಗೆ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಇದರಿಂದಾಚೆ ಇರುವ ಆಂಡ್ರೊಮಿಡಾ ಗೆಲಾಕ್ಸಿಯನ್ನೂ ಸ್ಪಷ್ಟವಾಗಿ ಟೆಲಿಸ್ಕೋಪ್‌ನಲ್ಲಿ ವೀಕ್ಷಿಸಬಹುದು. ಛಾಯಾಚಿತ್ರಗಳನ್ನೂ ತೆಗೆಯಬಹುದು. ನಾಸಾ ಮತ್ತು ಇಸ್ರೊ ತೆಗೆಯುವ ಗುಣಮಟ್ಟದಷ್ಟು ಚಿತ್ರ ತೆಗೆಯುವ ದುಬಾರಿ ಬೆಲೆಯ ಟೆಲಿಸ್ಕೋಪ್‌ಗಳನ್ನು ಕೆಲವರು ಇಲ್ಲಿಗೆ ತಂದು ವೀಕ್ಷಿಸುವುದು ವಿಶೇಷ.

ಖಗೋಲ ವೀಕ್ಷಕರು ಕೊಡಗಿನಲ್ಲಿ ನಕ್ಷತ್ರ ವೀಕ್ಷಣೆ ಸುಲಭ ಸಾಧ್ಯ ಎಂಬುದನ್ನು ಮನಗಂಡು ಇಲ್ಲಿಗೆ ಬಂದು ತಮ್ಮದೇ ಟೆಲಿಸ್ಕೋಪ್‌ನಲ್ಲಿ ಆಕಾಶಕಾಯ ವೀಕ್ಷಿಸಿ ವಾಪಸ್ ತೆರಳುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಈ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದೆ.

ಸೋಲಾರ್ ಟೆಲಿಸ್ಕೋಪ್ ಈ ವರ್ಷದ ವಿಶೇಷ

ಬೆಂಗಳೂರು ಅಸ್ಟ್ರಾನಮಿಕಲ್ ಸೊಸೈಟಿಯ ಖಗೋಳಾಸಕ್ತರು ಈ ಬಾರಿ ಸೋಲಾರ್ ಟೆಲಿಸ್ಕೋಪ್ ತಂದಿದ್ದು ವಿಶೇಷ. ಈ ಟೆಲಿಸ್ಕೋಪ್ ಮೂಲಕ ಹಗಲಿನಲ್ಲಿ ಸೂರ್ಯನ ಮೇಲೆ ನಡೆಯುವ ವಿದ್ಯಮಾನಗಳನ್ನು ಕಣ್ತುಂಬಿಕೊಂಡರು. ಸಾಮಾನ್ಯವಾಗಿ ಪ್ರತಿ 11 ವರ್ಷಗಳಿಗೆ ಒಮ್ಮೆ ಸೂರ್ಯನಲ್ಲಿ ಹೆಚ್ಚು ಚಟುವಟಿಕೆಗಳು ನಡೆಯುತ್ತವೆ. 2024–25ನೇ ಸಾಲಿನಲ್ಲಿ ಹೆಚ್ಚು ಚಟುವಟಿಕೆಗಳು ನಡೆದವು. ಹಾಗಾಗಿ, ಸೂರ್ಯನನ್ನು ವಿಶೇಷ ಟೆಲಿಸ್ಕೋಪ್‌ನಲ್ಲಿ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ವೀಕ್ಷಣೆ ಮಾಡಲಾಯಿತು. ಮತ್ತಷ್ಟು ಮಾಹಿತಿಗೆ: http://bas.org.in/ ನೋಡಬಹುದು.

ಆಂಡ್ರೊಮಿಡಾ ಗ್ಯಾಲಾಕ್ಸಿಯ ಚಿತ್ರವನ್ನು ಕೊಡಗಿನಲ್ಲಿ ನಂದನ್ ನರಸಿಂಹ ಅವರು ತೆಗೆದಿರುವುದು
ಕೊಡಗಿನಲ್ಲಿ ನಕ್ಷತ್ರ ವೀಕ್ಷಣೆಗಾಗಿ ಟೆಲಿಸ್ಕೋಪ್‌ಗಳನ್ನು ಸಿದ್ಧಪಡಿಸುತ್ತಿರುವುದು  ಚಿತ್ರ:ಗೌತಮ್

ತಾರಾಲಯ ತೆರೆಯಲು ಮೀನಮೇಷ; ಪ್ರವಾಸೋದ್ಯಮಕ್ಕೂ ಇದೆ ಅವಕಾಶ

ಹೊರಜಿಲ್ಲೆಗಳಿಂದ ಖಗೋಲ ವೀಕ್ಷಕರು ಕೊಡಗಿಗೆ ಬಂದು ನಕ್ಷತ್ರ ವೀಕ್ಷಣೆಗೆ ಸೂಕ್ತ ತಾಣವನ್ನು ತಾವೇ ಹುಡುಕಿಕೊಂಡು ನಕ್ಷತ್ರ ವೀಕ್ಷಿಸಿ ವಾಪಾಸ್ಸಾಗುತ್ತಿದ್ದಾರೆ. ಆದರೆ ಸರ್ಕಾರ ಮತ್ತು ಜಿಲ್ಲಾಡಳಿತ ಇನ್ನೂ ಇಲ್ಲೊಂದು ತಾರಾಲಯ ನಿರ್ಮಿಸಲು ಮೀನಮೇಷ ಎಣಿಸುತ್ತಿದೆ. ನಕ್ಷತ್ರಗಳು ಹೆಚ್ಚು ಸ್ಪಷ್ಟವಾಗಿ ಕಾಣುವ ಕಡೆ ತಾರಾಲಯ ನಿರ್ಮಿಸಬೇಕಿದೆ. ಇದಕ್ಕಾಗಿ ಹವ್ಯಾಸಿ ಖಗೋಳಾಸಕ್ತರ ಇಲ್ಲವೆ ಖಗೋಳ ವಿಜ್ಞಾನಿಗಳ ಅಭಿಪ್ರಾಯ ಪಡೆಯಬೇಕಿದೆ. ನಕ್ಷತ್ರಗಳ ವೀಕ್ಷಣೆಯಂತಹ ‘ಸ್ಟಾರ್‌ ಪಾರ್ಟಿ’ ಕೊಡಗಿನ ಪ್ರವಾಸೋದ್ಯಮದ ಮತ್ತೊಂದು ಭಾಗವಾಗುವ ಸಾಧ್ಯತೆಯೂ ಇದೆ. ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲೂ ಚಿಂತನೆ ನಡೆಸಬೇಕಿದೆ.

ನಕ್ಷತ್ರ ವೀಕ್ಷಣೆಗೆ ಕೊಡಗೇ ಏಕೆ ಸೂಕ್ತ?

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಬೆಳಕಿನ ಮಾಲಿನ್ಯ ತೀರಾ ಕಡಿಮೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಲ್ಲ ದಿನಗಳಲ್ಲೂ ಮೋಡಗಳಿಲ್ಲದ ಶುಭ್ರ ಆಕಾಶವನ್ನು ಕಾಣಬಹುದು. ಕೊಡಗು ಸಮಭಾಜಕ ವೃತ್ತಕ್ಕೆ ಸಮೀಪದಲ್ಲಿರುವುದರಿಂದ ಇಲ್ಲಿ ನಿಂತು ನೋಡಿದರೆ ಉತ್ತರ ಗೋಲ ಮತ್ತು ದಕ್ಷಿಣ ಗೋಲ ಎರಡರ ಆಕಾಶ ಕಾಯಗಳನ್ನು ಒಟ್ಟಿಗೆ ವೀಕ್ಷಿಸುವ ಅವಕಾಶವೂ ಇದೆ. ಹೀಗಾಗಿ ಕೊಡಗು ನಕ್ಷತ್ರ ವೀಕ್ಷಣೆಗೆ ಸೂಕ್ತ ಜಿಲ್ಲೆ ಎಂದು ಬೆಂಗಳೂರು ಅಸ್ಟ್ರಾನಮಿಕಲ್ ಸೊಸೈಟಿಯ ಟ್ರಸ್ಟಿ ವಿಶ್ವನಾಥ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.