ಗೋಣಿಕೊಪ್ಪಲು: ಕಿವಿಗಡಚಿಕ್ಕುವ ಯಾವುದೇ ಡಿಜೆ ಯಂತಹ ಅಬ್ಬರವಿಲ್ಲದೆ ಸುಶ್ರಾವ್ಯವಾದ ಜಾನಪದ ಗೀತೆ, ಭಜನೆ ಹಾಗೂ ಕೊಡಗಿನ ಸಾಂಪ್ರದಾಯಕ ವಾದ್ಯಗಳ ಮೂಲಕ ಸಾಗಿದ ಇಲ್ಲಿನ ದಸರಾ ಸ್ತಬ್ಧ ಚಿತ್ರ ಮೆರವಣಿಗೆ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮನ ಸೆಳೆಯಿತು.
ಇಲ್ಲಿನ ಆರ್‌ಎಂಸಿ ಆವರಣದಿಂದ ಮಧ್ಯಾಹ್ನ 2.30ಕ್ಕೆ ಆರಂಭಗೊಂಡ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪೊನ್ನಂಪೇಟೆ ಗೆಳೆಯರ ಬಳಗ ನಿರ್ಮಿಸಿದ್ದ ಕೊಪ್ಪಳ ಜಿಲ್ಲೆಯ ಕುಣಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ತಬ್ಧ ಚಿತ್ರ ಮೆಚ್ಚುಗೆ ಪಡೆಯಿತು.
ಈ ಶಾಲೆಗೆ ಗುಡಿಸಿಲಿನಲ್ಲಿ ವಾಸಿಸುತ್ತಿರುವ ಹುಚ್ಚಮ್ಮ ಎಂಬ ಮಹಿಳೆ ತನಗಿದ್ದ 2 ಎಕರೆ ಜಾಗವನ್ನು ದಾನವಾಗಿ ನೀಡಿ ಊರಿನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮಾಡಿದ ಸೇವೆ ಹಾಗೂ ಗೆಳೆಯರ ಬಳಗದ 'ಹುಚ್ಚಮನಿಗೊಂದು ಸಲಾಂ' ಎಂಬ ಘೋಷ ವಾಕ್ಯ ಕೂಡ ಸಾವಿರಾರು ಪ್ರೇಕ್ಷಕರ ಗಮನ ಸೆಳೆಯಿತು.
ಸರ್ವಂ ಬಳಗದ ಆಪರೇಷನ್ ಸಿಂಧೂರ ವಿಜಯೋತ್ಸವದ ಸ್ತಬ್ಧ ಚಿತ್ರ ಕೂಡ ಉತ್ತಮವಾಗಿತ್ತು. ಮೂರು ವಾಹನಗಳನ್ನು ಒಂದು ಗೂಡಿಸಿ ಒಂದು ಚೂರು ಪ್ಲಾಸ್ಟಿಕ್ ಇಲ್ಲದೆ ಎಲ್ಲವನ್ನೂ ಬಟ್ಟೆಯಿಂದಲೇ ತಯಾರಿಸಿ ರೂಪಿಸಿದ್ದ ಚಿತ್ರ ಪರಿಸರ ಪ್ರೇಮ ಮತ್ತು ದೇಶಭಕ್ತಿಗೆ ಸಾಕ್ಷಿಯಾಗಿತ್ತು. ಜತೆಗೆ ‘ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ಭಾರತೀಯರು ಎಂಬ ಸೆಲೆ ಉಕ್ಕಲಿ’ ಎಂಬ ಘೋಷವಾಕ್ಯವೂ ಕೂಡ ಭಾವೈಕ್ಯದ ಸಂಕೇತವಾಗಿತ್ತು. ಸ್ತಬ್ಧ ಚಿತ್ರದಲ್ಲಿ ಇದ್ದ ನೂರಾರು ದೇಶಭಕ್ತಿಯ ವಾಕ್ಯಗಳನ್ನು ಕೈಯಲ್ಲಿಯೇ ಬರೆದಿದ್ದು ವಿಶೇಷವಾಗಿತ್ತು.
ಮೂರು ತಿಂಗಳಿನಿಂದ ಚಿಂತಿಸಿ, ಶ್ರಮಿಸಿ ಚಿತ್ರ ರೂಪಿಸಲಾಯಿತು. ಇದಕ್ಕೆ ಅಂದಾಜು ₹ 80 ಸಾವಿರದಷ್ಟು ವೆಚ್ಚವಾಗಿದೆ ಎಂದು ಆಯೋಜಕರು ತಿಳಿಸಿದಾಗ ಸ್ತಬ್ಧ ತಯಾರಿಸುವಲ್ಲಿ ಆಯೋಜಕರ ಶ್ರಮದ ಅರಿವಾಯಿತು.
ಭಗತ್ ಸಿಂಗ್ ಯುವಕರ ಸಂಘದ ಮಾದಕ ವಸ್ತುಗಳಿಂದಾಗುವ ಹಾನಿಯನ್ನು ಕುರಿತು ತಯಾರಿಸಿದ ‘ಆಕ್ಪೋಟಪಸ್’ ಚಿತ್ರ ಪರಿಣಾಮಕಾರಿಯಾಗಿತ್ತು. ಮಾದಕ ವಸ್ತುಗಳಿಗೆ ದಾಸರಾಗಿ ಜೀವನ ಹಾಳುಮಾಡಿಕೊಳ್ಳುವ ಯುವಕರಿಗೆ ಎಚ್ಚರಿಕೆಯಾಗಿತ್ತು.
ಕೈಕೇರಿಯ ಪರಿಸರ ಪ್ರೇಮಿ ಬಳಗವದರು ನಿರ್ಮಿಸಿದ್ದ ಪರಿಸರ ಸ್ವಚ್ಛತೆ ಮತ್ತು ಮಾದಕ ವಸ್ತುಗಳ ಕುರಿತ ಚಿತ್ರವೂ ಉತ್ತಮ ಸಂದೇಶ ಸಾರಿತು. ‘ಮಕ್ಕಳ ಶಿಕ್ಷಣ ಉತ್ತಮ ಭವಿಷ್ಯದ ಕಡೆಗೆ’ ಎಂಬ ಘೋಷ ವಾಕ್ಯದ ಸ್ತಬ್ಧ ಚಿತ್ರ ಉತ್ತಮವಾಗಿತ್ತು.
ಆರ್‌ಎಸ್‌ಎಸ್ ಸಂಘಟನೆಗೆ 100 ವರ್ಷ ತುಂಬಿದ ನೆನಪಿಗಾಗಿ ಲೋಪಮುದ್ರ ಮಹಿಳಾ ಸಂಘಟನೆಯವರು ರೂಪಿಸಿದ್ದ ಆರ್‌ಎಸ್‌ಎಸ್ ಸ್ತಬ್ಧ ಚಿತ್ರ, ಬಂಟವಾಳದ ಶ್ರೀರಾಮ ಭಜನಾ ತಂಡದ ಹಾಡು ಮತ್ತು ಕುಣಿತ ಹಾಗೂ ಆರ್ ಎಸ್ಎಸ್ ಸಮವಸ್ತ್ರ ನೋಡುಗರ ಗಮನ ಸೆಳೆದವು.
ಕೇರಳದ ಎರ್ನಾಕುಲಂನ ಬೊಂಬೆ ಕುಣಿತ, ಹುದಿಕೇರಿ ಕೊಡಗು ವಾಲಗ ಮೆರವಣಿಗೆಗೆ ಕಳೆ ತುಂಬಿದವು. ಇವುಗಳ ಜತೆಗೆ ಶಿಕ್ಷಣ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ನರೇಗ, ತಾಲ್ಲೂಕು ಪಂಚಾಯಿತಿ, ಪರಿಶಿಷ್ಟ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಜಲಜೀವನ್ ಮಿಷಿನ್, ತೋಟಗಾರಿಕೆ ಇಲಾಖೆ ಮೊದಲಾದ ಸ್ತಬ್ಧ ಚಿತ್ರಗಳು ಕೂಡ ಪಾಲ್ಗೊಂಡಿದ್ದವು.
2 ಕಿ.ಮೀ ದೂರ ಸಾಗಿದ ಮೆರವಣಿಗೆ ಸಂಜೆ ಸಮುದಾಯ ಆರೋಗ್ಯ ಕೇಂದ್ರದ ಹಿಂಬದಿಯಲ್ಲಿರುವ ದಸರಾ ನಾಡಹಬ್ಬ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಬಹುಮಾನ ವಿರತಣೆ ಬಳಿಕ ಮುಕ್ತಾಯಗೊಂಡಿತು.
ಆರಂಭದಲ್ಲಿ ಸ್ತಬ್ಧ ಚಿತ್ರ ಮೆರವಣೆಗೆಯನ್ನು ಜಿಲ್ಲಾ ವಾಣಿಜ್ಯೋಮದ ಸಂಸ್ಥೆ ಅಧ್ಯಕ್ಷ ನಾಂಗೇಂದ್ರ ಪ್ರಸಾದ್ ಉದ್ಘಾಟಿಸಿದರು. ಸ್ಥಳೀಯ ವಾಣಿಜ್ಯೋದ್ಯಮಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.