ADVERTISEMENT

ಕೊಡವ ಕೌಟುಂಬಿಕ ಹಾಕಿ: ಮಳೆಯ ನಡುವೆ ಅದ್ಭುತ ಪಂದ್ಯ

ಕೊಡವ ಕೌಟುಂಬಿಕ ಹಾಕಿ ಟೂರ್ನಿಯ 25ನೇ ಆವೃತಿ ಮುದ್ದಂಡ ಕಪ್‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 2:57 IST
Last Updated 28 ಏಪ್ರಿಲ್ 2025, 2:57 IST
ಮುದ್ದಂಡ ಕಪ್‌ಗಾಗಿ ಮಂಡೇಪಂಡ ಹಾಗೂ ಚೇಂದಂಡ ತಂಡಗಳ ಆಟಗಾರರ ತೀವ್ರತರವಾದ ಸೆಣಸಾಟ ಹೀಗಿತ್ತು
ಮುದ್ದಂಡ ಕಪ್‌ಗಾಗಿ ಮಂಡೇಪಂಡ ಹಾಗೂ ಚೇಂದಂಡ ತಂಡಗಳ ಆಟಗಾರರ ತೀವ್ರತರವಾದ ಸೆಣಸಾಟ ಹೀಗಿತ್ತು   

ಮಡಿಕೇರಿ: ಫೈನಲ್‌ ಪಂದ್ಯದಲ್ಲಿ ಮಂಡೇಪಂಡ ಮತ್ತು ಚೇಂದಂಡ ತಂಡದ ಆಟಗಾರರು ಮಳೆಯ ನಡುವೆ ಅದ್ಭುತ ಪ್ರದರ್ಶನ ತೋರಿದರು. ಮಳೆಯಿಂದ ಪಂದ್ಯ ಸ್ಥಗಿತಗೊಂಡರೂ, ಉಭಯ ತಂಡಗಳ ಆಟಗಾರರ ಕಸರತ್ತುಗಳು ಪ್ರೇಕ್ಷಕರ ಮನಪಟಲದಲ್ಲಿ ಮೂಡಿದವು. ಉಭಯ ತಂಡಗಳ ಆಟಗಾರರ ಅದ್ಭುತ ಪ್ರದರ್ಶನವು ಪಂದ್ಯಕ್ಕೆ ಎದುರಾದ ಮಳೆಯ ತೊಡಕನ್ನು ಮರೆಸಿದವು.

ಕವಿದ ಕಾರ್ಮೋಡಗಳ ಮಧ್ಯೆಯೇ ಮಂಡೇಪಂಡ ಮತ್ತು ಚೇಂದಂಡ ತಂಡದ ಆಟಗಾರರು ಮೈದಾನದಲ್ಲಿ ಆಟ ಆರಂಭಿಸುತ್ತಿದ್ದಂತೆ, ಅಪಾರ ಸಂಖ್ಯೆಯ ಪ್ರೇಕ್ಷಕರ ಚಪ್ಪಾಳೆಗಳು ಮುಗಿಲು ಮುಟ್ಟಿತು.

ಪಂದ್ಯದ ಆರಂಭಿಕ ಕ್ಷಣಗಳಲ್ಲೆ ಚೇಂದಂಡ ತಂಡ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತು. ಇದನ್ನು ಗೋಲಾಗಿಸುವಲ್ಲಿ ಆಟಗಾರರು ವಿಫಲರಾದರು.

ADVERTISEMENT

ದಾಳಿಗೆ ಪ್ರತಿ ದಾಳಿ ನಡೆಸಿದ ಮಂಡೇಪಂಡ ತಂಡ, ಆಕರ್ಷಕ ಶಾರ್ಟ್ ಪಾಸ್‌ಗಳ ಮೂಲಕ ಎದುರಾಳಿ ಚೇಂದಂಡ ತಂಡದ ಗೋಲು ಆವರಣವನ್ನು ಪ್ರವೇಶಿಸಿ, ಗೋಲು ಗಳಿಕೆಯ ಪ್ರಯತ್ನ ನಡೆಸಿ, ವಿಫಲವಾಯಿತು. ಹೀಗಿದ್ದರೂ, ಮೊದಲ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತು. ಇದರಲ್ಲಿ ಮಂಡೇಪಂಡ ಗೌತಮ್ ಮಿಂಚಿನ ಗೋಲು ಸಿಡಿಸುವ ಮೂಲಕ ಮೊದಲ ಕ್ವಾರ್ಟರ್‌ನಲ್ಲಿ ಮಂಡೇಪಂಡ ತಂಡ ಮೂರು ಬಾರಿಯ ಚಾಂಪಿಯನ್ ಚೇಂದಂಡ ತಂಡದ ವಿರುದ್ಧ 1–0 ಗೋಲಿನ ಮುನ್ನಡೆಯನ್ನು ಸಾಧಿಸಿತು. ಇದೇ ಗೆಲುವಿಗೆ ಮೆಟ್ಟಿಲಾಯಿತು.

ದ್ವಿತೀಯ ಕ್ವಾರ್ಟರ್‌ನಲ್ಲಿ ಚೇಂದಂಡ ತಂಡ ಸಮಬಲದ ಗೋಲಿಗಾಗಿ ಆರಂಭಿಕ ಹಂತದಿಂದಲೆ ದಾಳಿಗೆ ಇಳಿಯಿತು. ದ್ವಿತೀಯ ಪೆನಾಲ್ಟಿ ಕಾರ್ನರ್ ಅವಕಾಶವನ್ನೂ ಪಡೆದುಕೊಂಡಿತು. ಆದರೆ, ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಮುಗ್ಗರಿಸಿತು. ಇದರ ಬೆನ್ನಲ್ಲೆ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯುತ್ತಿರುವಂತೆಯೆ ದಟ್ಟೈಸಿದ ಮೋಡಗಳು ಮಳೆ ಸುರಿಸಲಾರಂಭಿಸಿತು. ಸಿಡಿಲು ಗುಡುಗಿನ ಮಳೆಯ ನಡುವೆಯೇ ನಡೆದ ಪೆನಾಲ್ಟಿ ಕಾರ್ನರ್‌ನಲ್ಲಿ ಚೇಂದಂಡ ಗೋಲು ಗಳಿಸುವಲ್ಲಿ ವಿಫಲವಾಯಿತು.

ಒಂದು ಗಂಟೆಯ ಪರಿಶ್ರಮ ಮಳೆಗಾಹುತಿ!

ಬಿರುಸಿನ ಮಳೆಯಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಮೈದಾನದ ಅಲ್ಲಲ್ಲಿ ನೀರು ತುಂಬಿ ಕೊಂಡಿತು. ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಮಳೆ ನಿಂತ ಬಳಿಕ, ಮೈದಾನದಲ್ಲಿ ನಿಂತಿದ್ದ ನೀರನ್ನು ತೆಗೆದು ಆಟಕ್ಕೆ ಅಣಿಗೊಳಿಸಲಾಯಿತು.

ಮತ್ತೆ ಪಂದ್ಯ ಆರಂಭಗೊಳ್ಳುತ್ತಿದ್ದಂತೆಯೇ ಚೇಂದಂಡ ತಂಡ ಮತ್ತೆ ದಾಳಿಯನ್ನು ಸಂಘಟಿಸಿ ಸಮಬಲ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿದರು. ಇನ್ನೇನು ಗೋಲು ದಾಖಲಿಸುತ್ತದೆ ಎನ್ನುವಷ್ಟರಲ್ಲಿ ಮಂಡೇಪಂಡ ತಂಡದ ಗೋಲ್ ಕೀಪರ್ ದ್ಯಾನ್ ಬೋಪಣ್ಣ ಚುರುಕಿನಿಂದ ಚೆಂಡನ್ನು ತಡೆಗಟ್ಟಿ, ಚೇಂದಂಡ ತಂಡಕ್ಕೆ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಮತ್ತೆ ಮಳೆ ಸುರಿದು ಮೈದಾನ ಕೆರೆಯಂತಾಯಿತು.

ಮಳೆಯ ಆರ್ಭಟ ಇಳಿಮುಖವಾದರು ಮೈದಾನ ಮಳೆಯ ನೀರಿನಿಂದ ಆವರಿಸಿಕೊಂಡು ಸರಿಪಡಿಸಲಾಗದ ಹಂತವನ್ನು ಮುಟ್ಟಿತ್ತು. ಇದರಿಂದ ಕೊಡವ ಹಾಕಿ ಅಕಾಡೆಮಿ, ಆಯೋಜಕರು, ತೀರ್ಪುಗಾರರು ಮತ್ತು ಉಭಯ ತಂಡಗಳ ವ್ಯವಸ್ಥಾಪಕರು ಪರಸ್ಪರ ಚರ್ಚಿಸಿ, ಮಂಡೇಪಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಇದಕ್ಕೂ ಮುನ್ನ 3 ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ  2–1ರಿಂದ ಕುಪ್ಪಂಡ (ಕೈಕೇರಿ)ಯನ್ನು ಮಣಿಸಿ, 3ನೇ ಸ್ಥಾನ ಪಡೆದು ಕೊಂಡಿತು. ಕುಪ್ಪಂಡ (ಕೈಕೇರಿ) 4ನೇ ಸ್ಥಾನ ಪಡೆಯಿತು.

ಮುದ್ದಂಡ ಕಪ್‌ಗಾಗಿ ಮಂಡೇಪಂಡ ಹಾಗೂ ಚೇಂದಂಡ ತಂಡಗಳ ಆಟಗಾರರ ತೀವ್ರತರವಾದ ಸೆಣಸಾಟ ಹೀಗಿತ್ತು
ಪ್ರೇಕ್ಷಕರು ಮನದಣಿಯೇ ಕುಣಿದು ಕುಪ್ಪಳಿಸಿದರು
ಮುದ್ದಂಡ ಕಪ್‌ಗಾಗಿ ಮಂಡೇಪಂಡ ಹಾಗೂ ಚೇಂದಂಡ ತಂಡಗಳ ಆಟಗಾರರ ನಡುವೆ ನಡೆಯುತ್ತಿದ್ದ ಫೈನಲ್‌ ಪಂದ್ಯವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಸೇರಿದ್ದ ಅಪಾರ ಜನಸ್ತೋಮ
ಮಳೆಯಿಂದ ಮೈದಾನದಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲು ಆಯೋಜಕರು ಇನ್ನಿಲ್ಲದ ಕಸರತ್ತು ನಡೆಸಿದರು
ಮಳೆಯಿಂದ ಮೈದಾನದಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲು ಆಯೋಜಕರು ಇನ್ನಿಲ್ಲದ ಕಸರತ್ತು ನಡೆಸಿದರು
ಮೊದಲ ಸ್ಥಾನ ಪಡೆದ ಮಂಡೇಪಂಡ ದ್ವಿತೀಯ ಸ್ಥಾನ ಪಡೆದ ಚೇಂದಂಡ ತೃತೀಯ ಸ್ಥಾನ ಪಡೆದ ನೆಲ್ಲಮಕ್ಕಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.