ADVERTISEMENT

ಜನರ ನೆಚ್ಚಿನ ಪಾಳೇಗಾರ ಅಚ್ಚುನಾಯಕ

ಜಿಲ್ಲೆಯ ಇತಿಹಾಸದ ಗರ್ಭದೊಳಗೆ ಹುದುಗಿವೆ ಸಾಹಸಮಯ ಘಟನೆಗಳು

ಜೆ.ಸೋಮಣ್ಣ
Published 14 ಏಪ್ರಿಲ್ 2019, 5:03 IST
Last Updated 14 ಏಪ್ರಿಲ್ 2019, 5:03 IST
ಗೋಣಿಕೊಪ್ಪಲು ಬಳಿಯ ಚಿಕ್ಕಮಂಡೂರಿನಲ್ಲಿರುವ ಅಚ್ಚುನಾಯಕನ ಅರಮನೆಯ ವಠಾರ
ಗೋಣಿಕೊಪ್ಪಲು ಬಳಿಯ ಚಿಕ್ಕಮಂಡೂರಿನಲ್ಲಿರುವ ಅಚ್ಚುನಾಯಕನ ಅರಮನೆಯ ವಠಾರ   

ಗೋಣಿಕೊಪ್ಪಲು: ಕೊಡಗು ಎಂದ ಕೂಡಲೇ ಮೇಲ್ನೋಟಕ್ಕೆ ಕಂಡು ಬರುವುದು ಇಲ್ಲಿನ ಪರಿಮಳಭರಿತ ಕಾಫಿ, ಹಚ್ಚ ಹಸಿರಿನ ನಿಸರ್ಗ. ಇದರ ಹೊರತಾಗಿಯೂ ಈ ಪುಟ್ಟ ಜಿಲ್ಲೆ ತನ್ನ ಇತಿಹಾಸದ ಗರ್ಭದೊಳಗೆ ಅನೇಕ ಸಾಹಸಮಯ ಘಟನೆಗಳನ್ನು ಹುದುಗಿಟ್ಟಿಸಿಕೊಂಡಿದೆ.

1565ರ ಸಂದರ್ಭದಲ್ಲಿ ಕೊಡಗು 11 ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿತ್ತು. ಅವರಲ್ಲಿ ಅಚ್ಚುನಾಯಕ ಒಬ್ಬ. ಈತನ ಅರಮನೆ ಇದ್ದ ಕುರುಹು ಈಗಲೂ ಪೊನ್ನಂಪೇಟೆ ಸಮೀಪದ ಚಿಕ್ಕಮಂಡೂರಿನಲ್ಲಿದೆ. ಈಶ್ವರ ಭಕ್ತನಾಗಿದ್ದ ಅಚ್ಚುನಾಯಕ ಕಟ್ಟಿಸಿದ ಶಿವನ ದೇವಾಲಯ ಪಕ್ಕದಲ್ಲಿಯೇ ಇದೆ. ಜತೆಗೆ, ತನ್ನನ್ನು ಸಾಕಿದ ತಾಯಿ ಅವ್ವಯ್ಯಗೌಡಿ, ಆಸರೆ ನೀಡಿದ ಪಿರಿಯಾಪಟ್ಟಣದ ದೊರೆ ನಂಜುಂಡ ಅರಸನ ವಿಗ್ರಹಗಳನ್ನು ಕಲ್ಲಿನಲ್ಲಿ ಕೆತ್ತಿಸಲಾಗಿದೆ.

ಇದರ ಮತ್ತೊಂದು ಬದಿಯಲ್ಲಿ ಅಚ್ಚುನಾಯಕ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆ ಒಳಗೆ ಕಲ್ಲಿನಿಂದ ಕೆತ್ತಿಸಿದ ಎನ್ನಲಾದ ಕೈಮಡವಿದೆ. ಇದಕ್ಕೆ ಬಾಗಿಲಿಲ್ಲ. ಒಂದೇ ರಾತ್ರಿಯಲ್ಲಿ ಇಡೀ ಕೈಮಡವನ್ನು ನಿರ್ಮಿಸಬೇಕು ಎಂದು ಪಣತೊಟ್ಟಿದ್ದ ರಾಜನಿಗೆ ಬೆಳಗಾಗಿದ್ದರಿಂದ ಬಾಗಿಲು ನಿರ್ಮಿಸಲು ಸಾಧ್ಯವಾಗಲಿಲ್ಲ ಎಂಬುದು ಹಿರಿಯರಾದ ಅಜ್ಜಿಕುಟ್ಟೀರ ಅಪ್ಪಾಜಿ ಅವರ ಅಭಿಪ್ರಾಯ.

ADVERTISEMENT

ಇದರ ಮತ್ತೊಂದು ಬದಿಯಲ್ಲಿ ಅಚ್ಚುನಾಯಕನ ತಂದೆ ಚಿಟ್ಟಿಯಪ್ಪ ನಾಯಕನ ಗೋರಿ ಇರುವ ಅಂಬಲವಿದೆ. ಅದರ ಬದಿಯಲ್ಲಿಯೇ ವಿಶಾಲವಾದ ಕೆರೆಯಿದೆ. ಅಚ್ಚುನಾಯಕ ಪಿರಿಯಾಪಟ್ಟಣದಿಂದ ಕರೆದು ತಂದಿದ್ದ 30 ಕುಟುಂಬಗಳ ಕಾರ್ಮಿಕರಿಗೆ ನೀಡಿದ್ದ ಕೃಷಿಭೂಮಿಗೆಅನುಕೂಲವಾಗಲಿ ಎಂಬ ಕಾರಣಕ್ಕೆ ಕೆರೆಯನ್ನು ನಿರ್ಮಿಸಿದ. ಇದು ಕೊಡಗಿನಲ್ಲಿ 3ನೇ ದೊಡ್ಡ ಕೆರೆ ಎನ್ನಲಾಗುತ್ತಿದೆ.

ನಾಯಕನ ಇತಿಹಾಸ: ಅಚ್ಚುನಾಯಕ ಅಂಜಿಗೇರಿ ನಾಡಿನ ಪಾಳೇಗಾರನಾಗಿದ್ದ ಕಟ್ಟೆಮನೆ ಚಿಟ್ಟಿಯಪ್ಪ ನಾಯಕನ ಮಗ. ಅಚ್ಚುನಾಯಕ 2 ವರ್ಷದವನಿರುವಾಗ ತಾಯಿ ಮೃತಪಟ್ಟರು. ಆಗ ಈತನನ್ನು ಮೇದಮಾಡ ಅಯ್ಯವ್ವ ಮಡಿಲಮಗುವಾಗಿ ಸಾಕಿದರು. ಚಿಟ್ಟಿಯಪ್ಪ ನಾಯಕ ಹುಲಿಕೊಂದ ವೀರನೆಂಬ ಖ್ಯಾತಿಗೆ ಒಳಗಾಗಿ ನರಿಮಂಗಲ (ಹುಲಿ ಜತೆ ಮದುವೆ) ಆದಾಗ ಈತನ ಕೀರ್ತಿ ನಾಡಿನೆಲ್ಲೆಡೆ ಹಬ್ಬಿತು.

ಇದನ್ನು ಕೇಳಿ ಸಹಿಸಿಕೊಳ್ಳಲಾಗದ ಕಿರ್ ನಾಡ್ ಮತ್ತೂರಿನ ಮುಕ್ಕಾಟಿ ಶಂಭು, ಪತ್ತುಗಟ್ಟುನಾಡಿನ ಪಾಳೇಗಾರ ಮಾಚಂಗಡ ದೇವಯ್ಯ ನಾಯಕನ ಜತೆ ಸೇರಿ ಚಿಟ್ಟಿಯಪ್ಪ ನಾಯಕನನ್ನುಮೋಸದಿಂದ ಕೊಂದು ಅರಮನೆಗೆ ರಾತ್ರೋರಾತ್ರಿ ಬೆಂಕಿ ಇಟ್ಟರು. ಆಗ ಅರಮನೆ ಹುಲ್ಲಿನ ಚಾವಣಿಯಿಂದ ಕೂಡಿತ್ತು.ಗಾಢ ನಿದ್ರೆಯಲ್ಲಿದ್ದ ಚಿಟ್ಟಿಯಪ್ಪ ನಾಯಕನ 2 ವರ್ಷದ ಮಗ ಅಚ್ಚುನಾಯಕನನ್ನು ತಾಯಿ ಅವ್ವಯ್ಯ ಬಾಚಿ ತಬ್ಬಿಕೊಂಡು ಮನೆಯ ಹಿಂದಿನಿಂದ ಮೆಲ್ಲನೆ ಪಾರಾದಳು. ಬಳಿಕ ಇತರರ ಸಹಾಯ ಪಡೆದು ಪಿರಿಯಾಪಟ್ಟಣದ ರಾಜ ನಂಜುಂಡ ಅರಸನ ಮನೆಗೆ ಬಂದು ಕೂಲಿಗೆ ಸೇರಿದಳು.

ಬಹಳ ವರ್ಷಗಳ ಬಳಿಕ ನೈಜತೆ ಅರಿತ ನಂಜುಂಡ ಅರಸ ಅಚ್ಚುನಾಯಕನನ್ನು ಪ್ರೀತಿಯಿಂದ ಸಾಕ ತೊಡಗಿದ. ಅಷ್ಟರಲ್ಲಿ ಅವ್ವಯ್ಯ ತೀರಿಕೊಂಡಳು. ಬಳಿಕ ಅಚ್ಚುನಾಯಕನಿಗೆ ಅರಸನೇ ಆಸರೆಯಾದ. ಅಷ್ಟರಲ್ಲಿ ನಂಜುಂಡ ಅರಸ ಬಾಲಕನಿಗೆ ಕತ್ತಿವರಸೆ, ಕುಸ್ತಿ, ಮೊದಲಾದ ವಿದ್ಯೆ ಕೊಡಿಸಿದ.

ಯೌವನಕ್ಕೆ ಬಂದ ನಾಯಕ ತನ್ನ ತಂದೆಯ ಸಾಮ್ರಾಜ್ಯಕ್ಕೆ ಮರಳಿದ. ತಂದೆಯಂತೆಯೇ ಮಗನ ಕೀರ್ತಿ ಎಲ್ಲೆಡೆ ಹರಡತೊಡಗಿದಾಗ 1703ರಲ್ಲಿ ಮಡಿಕೇರಿ ಭಾಗದ ಹಾಲೇರಿಯಲ್ಲಿದ್ದ ದೊಡ್ಡವೀರಪ್ಪ ಅಚ್ಚುನಾಯಕನನ್ನು ಸೋಲಿಸಲು ಸಂಚು ರೂಪಿಸಿದ್ದ. ಪರದಂಡ ಪೊನ್ನಪ್ಪನನ್ನು ಬಳಸಿಕೊಂಡು ಮೋಸದಿಂದ ಅಚ್ಚುನಾಯಕನನ್ನು ಹತ್ಯೆ ಮಾಡಿಸಿದ. ಬಳಿಕ ನಾಯಕನ ಸಾಮ್ರಾಜ್ಯವನ್ನು ವಶಪಡಿಸಿಕೊಂಡ.

ಮಗನನ್ನೇ ಕೊಲ್ಲಿಸಿದ ನಾಯಕ

ಅಚ್ಚುನಾಯಕನಿಗೆ 5 ಪುತ್ರರು ಹಾಗೂ ಪುತ್ರಿ ಇದ್ದರು. ಇವರಲ್ಲಿ ಹಿರಿಯ ಮಗ ಕಾಳಯ್ಯ ಉತ್ತಮ ಗುಣ ಬೆಳೆಸಿಕೊಳ್ಳದೇ ಜನತೆಗೆ ಕಿರುಕುಳ ಕೊಡುತ್ತಿದ್ದ. ಇದರಿಂದ ಕುಪಿತಗೊಂಡ ನಾಯಕ ತನ್ನ ಮಗನನ್ನೇ ಕೊಲ್ಲಿಸಿ ಜನರನ್ನು ರಕ್ಷಿಸಿದ. ಮಗನ ಸಮಾಧಿ ಸ್ಥಳದಲ್ಲಿ ದೊಡ್ಡದೊಂದು ಮರವಿದ್ದು, ಅಲ್ಲಿ ಪ್ರತಿ ವರ್ಷ ತೆರೆ ಉತ್ಸವ ನಡೆಯುತ್ತದೆ.

ಅರಮನೆ ಸುಟ್ಟಹೋದ ಜಾಗದಲ್ಲಿ ಈಗಲೂ ಭತ್ತದ ಕರಿ ಸಿಗುತ್ತಿದೆ ಎನ್ನುತ್ತಾರೆ ಅಜ್ಜಿಕುಟ್ಟೀರ ಕುಟುಂಬದ ಪಟ್ಟೇದಾರ ಭೀಮಯ್ಯ. ಈ ಜಾಗದಲ್ಲಿ ಈಗ ಅಜ್ಜಿಕಟ್ಟೀರ ಕುಟುಂಬಸ್ಥರು ನೆಲೆ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.