ಮಡಿಕೇರಿ: ‘ಸಮಾಜದಲ್ಲಿ ಶೋಷಿತ ವರ್ಗದವರನ್ನು ಗುರುತಿಸಿ ಅವರನ್ನು ಮೇಲೆತ್ತಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಭಾನುವಾರ ಕೊಡಗು ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡುವುದರ ಮೂಲಕ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪ್ರಗತಿಗೆ ಕಾರಣರಾದರು. ಅಸ್ಪೃಶ್ಯತೆ, ಅಂಧಕಾರ, ಮೂಢನಂಬಿಕೆ, ಮೇಲುಕೀಳು ಭಾವನೆ ಹೋಗಲಾಡಿಸಲು ಶ್ರಮಿಸಿದವರು; ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮಾಜದಲ್ಲಿ ಜೀವನ ನಡೆಸುವ ಮೂಲಕ ಪ್ರತಿಯೊಬ್ಬರಿಗೂ ಸಮಾನತೆಯನ್ನು ಅಂಬೇಡ್ಕರ್ ಕಲ್ಪಿಸಿದ್ದಾರೆ. ಇವರ ವಿಚಾರಧಾರೆಗಳು ಸಮಾಜಕ್ಕೆ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಲು ಮುಂದಾಗಬೇಕು’ ಎಂದು ಹೇಳಿದರು.
‘ಶಿಕ್ಷಣದಿಂದ ಸಂಸ್ಕಾರ, ವಿನಯ ಕಲಿಯಲು ಸಾಧ್ಯ. ಪ್ರತಿ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಸಾಧನೆಯ ಹಾದಿಯನ್ನು ಸಾಗಬೇಕು’ ಎಂದು ಸಲಹೆ ನೀಡಿದರು.
ಡಿವೈಎಸ್‌ಪಿ ಸುಂದರರಾಜ್ ಮಾತನಾಡಿ, ‘ಗ್ರಾಮೀಣ ಜನರಿಗೆ ಸರ್ಕಾರ ನೀಡುವ ಯೋಜನೆಗಳನ್ನು ತಲುಪಿಸಿದಾಗ ಮಾತ್ರ ಅಂಬೇಡ್ಕರ್ ಅವರ ಆಶಯಗಳು ಈಡೇರಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗಲಿದೆ’ ಎಂದು ಹೇಳಿದರು.
ಜತೆಗೆ ಜಿಲ್ಲೆಯ ಶ್ರೀಶಕ್ತಿ ವೃದ್ಧಾಶ್ರಮದ ಬಂಧುಗಳಿಗೆ ಬಟ್ಟೆ ವಿತರಣೆ ಮಾಡಲಾಯಿತು. ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್, ಮಡಿಕೇರಿ ಡಾ.ಅಂಬೇಡ್ಕರ್ ಭವನದ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷ ಡಾ.ವಿ.ಎಸ್. ಸತೀಶ್, ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎಚ್.ಎಲ್. ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.