ADVERTISEMENT

ನಾಪೋಕ್ಲು: ಕಾಡುಕೋಣ ಮಾಂಸ ಸಾಗಾಟಕ್ಕೆ ಯತ್ನ

ಕಾರು ಮರಕ್ಕೆ ಡಿಕ್ಕಿ: ಆರೋಪಿಗಳು ಪರಾರಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 14:43 IST
Last Updated 4 ಜೂನ್ 2023, 14:43 IST
ಕಾಡುಕೋಣ ಮಾಂಸ ಸಾಗಾಟ ಮಾಡಲು ಬಳಸಿದ ಕಾರು ಅಪಘಾತದಿಂದ ಜಖಂಗೊಂಡಿರುವುದು
ಕಾಡುಕೋಣ ಮಾಂಸ ಸಾಗಾಟ ಮಾಡಲು ಬಳಸಿದ ಕಾರು ಅಪಘಾತದಿಂದ ಜಖಂಗೊಂಡಿರುವುದು   

ನಾಪೋಕ್ಲು: ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮದಿಂದ ಶುಕ್ರವಾರ ರಾತ್ರಿ ಕಾಡುಕೋಣ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದವರ ಕಾರು ಅಪಘಾತವಾಗಿ, ಆರೋಪಿಗಳು ಪರಾರಿಯಾಗಿದ್ದಾರೆ.

ಕೇರಳ ರಾಜ್ಯದ ನೋಂದಣಿ ಸಂಖ್ಯೆಯ ಕಾರಿನಲ್ಲಿ ಕಾಡುಕೋಣ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡಲು ಆರೋಪಿಗಳು ಯತ್ನಿಸಿದ್ದರು. ಖಚಿತ ಸುಳಿವಿನ ಮೇರೆಗೆ ನಾಪೋಕ್ಲು ಠಾಣೆ ಪೊಲೀಸರು ಹಿಂಬಾಲಿಸಿದ್ದು, ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಸುಭಾಷ್‌ ನಗರದ ಬಳಿ ಚಾಲಕ ಅತೀ ವೇಗವಾಗಿ ಕಾರು ಓಡಿಸಿದ್ದರಿಂದ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಯಿತು. ಅಪಘಾತಕ್ಕೀಡಾದ ಕಾರನ್ನು ಪೊಲೀಸರು ಪತ್ತೆ ಹಚ್ಚಿದರು. ನಾಪೋಕ್ಲು ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ವಾಹನ ಸಹಿತ ಚೀಲಗಳಲ್ಲಿ ತುಂಬಿದ್ದ 50 ಕೆ.ಜಿ ಕಾಡುಕೋಣ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್, ಹೆಚ್ಚುವರಿ ಪೊಲೀಸ್ ಉಪನಿರೀಕ್ಷಕ ಸುಂದರರಾಜ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಜಗದೀಶ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಶೇಖರ್ ಅವರ ಮಾರ್ಗದರ್ಶನದಲ್ಲಿ ನಾಪೋಕ್ಲು ಪಿಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಪ್ರಕರಣವನ್ನು ಅರಣ್ಯ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.