ADVERTISEMENT

ಸುಂಟಿಕೊಪ್ಪ: ಶಕ್ತಿಯ ಪ್ರತೀಕವೇ ಅಣ್ಣಪ್ಪ ದೈವಸ್ಥಾನ

ಸುನಿಲ್ ಎಂ.ಎಸ್.
Published 13 ಏಪ್ರಿಲ್ 2025, 7:24 IST
Last Updated 13 ಏಪ್ರಿಲ್ 2025, 7:24 IST
ಅಣ್ಣಪ್ಪ ಪಂಜುರ್ಲಿ ದೈವ
ಅಣ್ಣಪ್ಪ ಪಂಜುರ್ಲಿ ದೈವ   

ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಚೆಟ್ಟಳ್ಳಿ ರಸ್ತೆಯ ನಾರ್ಗಾಣೆ ಗ್ರಾಮದ ಶ್ರೀದೇವಿಯ ಶ್ರೀ ಅಣ್ಣಪ್ಪಸ್ವಾಮಿ ದೈವಸ್ಥಾನವು ಈ ಭಾಗದ ಶಕ್ತಿಯ ಪ್ರತೀಕವಾಗಿದ್ದು, ಇದೀಗ ವಾರ್ಷಿಕ ಧರ್ಮದೈವದ ನೇಮೋತ್ಸವಕ್ಕೆ ಸಜ್ಜಾಗಿ ನಿಂತಿದೆ‌.

ಸುಂಟಿಕೊಪ್ಪ ಪಟ್ಟಣದಿಂದ 2 ಕಿ.ಮೀ, ಚೆಟ್ಟಳ್ಳಿಯಿಂದ 7 ಕಿ.ಮೀ ಹಾಗೂ ಮಡಿಕೇರಿಯಿಂದ 16 ಕಿ.ಮೀ ಅಂತರದಲ್ಲಿರುವ ಶ್ರೀದೇವಿಯ ಅಣ್ಣಪ್ಪ ಸ್ವಾಮಿ, ಪಂಜುರ್ಲಿ ದೈವಸ್ಥಾನವು ಕಳೆದ 36 ವರ್ಷಗಳಿಂದ ಭಕ್ತರ ನಂಬಿಕೆಯ ವಿಶ್ವಾಸದ ಪರಾಕಾಷ್ಠೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ‌. ಇದಕ್ಕೆ ಸಾಕ್ಷಿಯಾಗುವಂತೆ ವಾರ್ಷಿಕವಾಗಿ ನಡೆಯುವ ನೇಮೋತ್ಸವದಲ್ಲಿ ಭಕ್ತರು ಆಗಮಿಸಿ ತಮ್ಮ ಬೇಡಿಕೆಯನ್ನು ಈಡೇರಿಸಿದ ಪ್ರತೀಕವಾಗಿ ಹರಕೆ ಒಪ್ಪಿಸುತ್ತಾರೆ.

ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮಕ್ಕೆ ಕೆಲಸಕ್ಕೆಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ವಾಸುದೇವ ಎಂಬುವವರು ಬಂದು ನೆಲೆಸಿದ್ದರು. ಹಾಗೆ ಬಂದಂತಹ ವಾಸುದೇವ ಅವರು ತಮ್ಮ ಕುಟುಂಬದ ದೈವವಾದ ಅಣ್ಣಪ್ಪ ಪಂಜುರ್ಲಿ ಶಕ್ತಿಯನ್ನು ತಂದು ತೋಟದ ಲೈನ್ ಮನೆಯಲ್ಲಿ ಪೂಜಿಸುತ್ತಿದ್ದರು. ತಾವು ನೆಲೆಸಿದ್ದ ಜಾಗದಲ್ಲೇ ಅಣ್ಣಪ್ಪ ಪಂಜುರ್ಲಿ ವ್ರತಾಚರಣೆ ಮಾಡಿಕೊಂಡು ವಾರ್ಷಿಕ ಪೂಜೆ ಹಾಗೂ ದೈವಗಳಿಗೆ ನಿತ್ಯ ಪೂಜೆಯನ್ನು ಮತ್ತು ಪ್ರತಿ ತಿಂಗಳ ಅಮಾವಾಸ್ಯೆಯಂದು ದೈವಗಳಿಗೆ ಅಗೇಲು ಅರ್ಪಿಸಿ ನಂತರ ಅಕ್ಕ ಪಕ್ಕದ ಮನೆಯವರಿಗೆ ಅನ್ನಸಂತರ್ಪಣೆ ನೀಡುತ್ತಿದ್ದರು.

ADVERTISEMENT

ವಾಸುದೇವ ಅವರು ನಿಧನರಾದ ನಂತರ ಅವರ ಪುತ್ರ ಬಿ.ವಿ.ರಾಜ ರೈ ಅವರು ಸುಂಟಿಕೊಪ್ಪ ಬಳಿಯ ನಾರ್ಗಾಣೆ ಗ್ರಾಮಕ್ಕೆ ಬಂದು ನೆಲೆಸಿದಾಗ ಅಲ್ಲಿಯೂ ದೈವಕ್ಕೆ ಪುಟ್ಟ ಗುಡಿಯನ್ನು ನಿರ್ಮಿಸಿಕೊಂಡು ಪೂಜೆ ಸಲ್ಲಿಸುತ್ತಾ ಬರಲಾಯಿತು‌. ನಂತರ ಸುಮಾರು ₹ 3 ಲಕ್ಷ ವೆಚ್ಚದಲ್ಲಿ ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಕಾರ್ಯ ಸುಗಮವಾಗಿ ನಡೆದು ಪ್ರತಿವರ್ಷ ಏ. 14, 15ರಂದು ಪೂಜೆ, ನೇಮೋತ್ಸವ ನಡೆಯುತ್ತಾ ಬಂದಿದೆ.

ಬಿ.ವಿ.ರಾಜ ರೈ ಅವರ ನಿಧನದ ನಂತರ ಅವರ ಮಗ ಶಿವಪ್ರಸಾದ್ ರೈ ಅವರು ತಿಂಗಳ ಅಮಾವಾಸ್ಯೆಯಂದು ನುಡಿಯನ್ನು ಹೇಳುತ್ತಿದ್ದರೆ, ನಿತ್ಯಪೂಜೆ ಹಾಗೂ ಮೇಲುಸ್ತುವಾರಿಯನ್ನು ಬಿ.ಡಿ.ರಾಜು ರೈ ನೆರವೇರಿಸುತ್ತಾರೆ.

ಚಾಮುಂಡಿ ಮತ್ತು ಗುಳಿಗ

ವಾರ್ಷಿಕವಾಗಿ ನಡೆಯುವ ನೇಮೋತ್ಸವದಲ್ಲಿ ಅಣ್ಣಪ್ಪ ಪಂಜುರ್ಲಿ ಹಾಗೂ ಪರಿವಾರ ದೇವರುಗಳಾದ ಪಾಷಣಮೂರ್ತಿ, ಚಾಮುಂಡಿ, ಗುಳಿಗ, ಧೂಮವತಿ ದೈವಗಳಿಗೂ ಸ್ಥಾನ ಇದೆ.

ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ದೈವಸ್ಥಾನದಲ್ಲಿ ಬಾಳೆ ಗೊನೆ ಕಡಿಯುವ ಮೂಲಕ 7 ದಿನಗಳ ಕಾಲ ವ್ರತಾಚರಣೆಯಲ್ಲಿ ತೊಡಗಿಸಿಕೊಂಡು ಆನಂತರ ಗಣಪತಿ ಹೋಮ ಹವನದೊಂದಿಗೆ ದೇವಾಲಯದಲ್ಲಿ ವಾರ್ಷಿಕ ನೇಮೋತ್ಸವಕ್ಕೆ ಚಾಲನೆ ದೊರಕುತ್ತದೆ.

ಮರುದಿನ ದೈವಗಳಿಗೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ತಮ್ನ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೆ ಇಡುವುದು ಹಾಗೂ ಹರಕೆಯನ್ನು ಸಲ್ಲಿಸುವುದನ್ನು ಕಾಣಬಹುದು.

ಪಾಷಣ ಮೂರ್ತಿ ದೈವ
ಸುಂಟಿಕೊಪ್ಪ ಸಮೀಪದ‌ ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪ ಸ್ವಾಮಿ ದೈವಸ್ಥಾನ
ಏ.14 ಮತ್ತು 15 ರಂದು ಧರ್ಮದೈವಗಳ ನೇಮೋತ್ಡವ ನಡೆಯಲಿದೆ‌. ಕೊಡಗು ಮೈಸೂರು ದಕ್ಷಿಣ ಕನ್ನಡ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ಅಮಾವಾಸ್ಯೆ ದಿನ ದೈವಗಳಿಗೆ ಅಗೇಲು ನೀಡಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತಿದೆ.
ಬಿ.ಡಿ.ರಾಜು ರೈ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಮುಖ್ಯಸ್ಥ
ಏ‌‌.14 ರಿಂದ ನಡೆಯುವ ಧರ್ಮದೈವದ ನೇಮೋತ್ಸವದ ನಿಮಿತ್ತ ಎಲ್ಲ ರೀತಿಯ ಸಿದ್ಧತೆಗಳು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ದೈವ ಆರಾಧಕರು ಕೋಲ ಕಟ್ಟುತ್ತಾರೆ.
ಶಿವಪ್ರಸಾದ್ ರೈ ದೈವ ಆರಾಧಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.