ADVERTISEMENT

ಸಬ್ಬಮ್ಮ ದೇವರ ವಾರ್ಷಿಕ ಹಗಲು ಸುಗ್ಗಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:52 IST
Last Updated 28 ಏಪ್ರಿಲ್ 2025, 13:52 IST
ಸೋಮವಾರಪೇಟೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಸಬ್ಬಮ್ಮ ದೇವರ ವಾರ್ಷಿಕ ಹಗಲು ಸುಗ್ಗಿ ಉತ್ಸವ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸೋಮವಾರ ನಡೆಯಿತು
ಸೋಮವಾರಪೇಟೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಸಬ್ಬಮ್ಮ ದೇವರ ವಾರ್ಷಿಕ ಹಗಲು ಸುಗ್ಗಿ ಉತ್ಸವ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸೋಮವಾರ ನಡೆಯಿತು   

ಸೋಮವಾರಪೇಟೆ: ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಸಬ್ಬಮ್ಮ ದೇವರ ವಾರ್ಷಿಕ ಹಗಲು ಸುಗ್ಗಿ ಉತ್ಸವ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸೋಮವಾರ ನಡೆಯಿತು.

ಗ್ರಾಮದ ನಡು ಭಾಗದಲ್ಲಿರುವ ಜೋಡಿ ಕಂಬತಳೆಯಲ್ಲಿ ಸಬ್ಬಮ್ಮ ದೇವರಿಗೆ ವಿಶೇಷ ಪೂಜೆಗಳು ನಡೆದವು. ಸುಗ್ಗಿ ಸಂದರ್ಭದ 12 ದಿನಗಳ ಕಾಲ ಗ್ರಾಮಸ್ಥರು ಕಟ್ಟುನಿಟ್ಟಿನ ಆಚರಣೆಯಲ್ಲಿ ತೊಡಗಿದ್ದರು. ಮಲ್ಲು ಸುಗ್ಗಿಯಲ್ಲಿ ಹಾನಗಲ್ಲು ಶೆಟ್ಟಳ್ಳಿ ಮಾತ್ರವಲ್ಲದೇ ಸುತ್ತಮುತ್ತಲ ಊರಿನಿಂದ ಸಾರ್ವಜನಿಕ ಭಕ್ತಾದಿಗಳು, ಬಂಧುಗಳು ಆಗಮಿಸಿ ಗ್ರಾಮ ದೇವಿಗೆ ಪೂಜೆ ಸಲ್ಲಿಸಿದರು.

ಏ.29ರಂದು ಮಾರಿ ಕಳುಹಿಸುವ ಸಾಂಪ್ರದಾಯಿಕ ಪೂಜೆಯ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ತೆರೆಬೀಳಲಿದೆ. ಗ್ರಾಮದ ಸುಗ್ಗಿಕಟ್ಟೆಯಲ್ಲಿ ತೊಟ್ಟಲು ತೂಗುವುದು, ದೇವರ ಉತ್ಸವ ಮೂರ್ತಿಯ ಮೆರವಣಿಗೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ತೆಂಗಿನ ಕಾಯಿ ಕೀಳುವುದು, ಸುಗ್ಗಿ ಕುಣಿತ ಸೇರಿದಂತೆ ಇತರ ಸಾಂಪ್ರದಾಯಿಕ ಆಚರಣೆಗಳು ನೆರವೇರಿದವು.

ADVERTISEMENT

ಸುಗ್ಗಿ ಕಟ್ಟೆಗೆ ಆಗಮಿಸಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ‘ಪೂರ್ವಿಕರು ನಮ್ಮ ನೆಲಜಲ, ಪರಿಸರ ಸಂರಕ್ಷಣೆಯೊಂದಿಗೆ ಭವ್ಯ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿಕೊಟ್ಟಿದ್ದಾರೆ. ಇವುಗಳನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಕೆಲಸ ನಮ್ಮಿಂದಾಗಬೇಕು’ ಎಂದರು.

‘ಕಳೆದ 12 ದಿನಗಳ ಹಿಂದೆ ಬೀರೇದೇವರಿಗೆ ವೀಳ್ಯ ಚೆಲ್ಲುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಿದ್ದು, ಊಲು ಏರಿಸುವುದು, ಶುಕ್ರವಾರ ದೇವರಿಗೆ ಎಡೆ ಸಮರ್ಪಣೆ, ಶನಿವಾರ ಹಗಲು ಸುಗ್ಗಿ, ಭಾನುವಾರ ಹೆದ್ದೇವರ ಬನದಲ್ಲಿ ಪೂಜೆ, ಸೋಮವಾರ ಮಲ್ಲುಸುಗ್ಗಿಯನ್ನು ಸಂಭ್ರಮದಿಂದ ನಡೆಸಲಾಗಿದೆ’ ಎಂದು ಗ್ರಾಮ ಸಮಿತಿ ಅಧ್ಯಕ್ಷ ಎಲ್.ಬಿ. ಉಲ್ಲಾಸ್ ತಿಳಿಸಿದರು.

ಸಮಿತಿ ಉಪಾಧ್ಯಕ್ಷ ಡಿ.ಟಿ.ಆನಂದ, ಕಾರ್ಯದರ್ಶಿ ಕವನ್, ಖಜಾಂಚಿ ಎಂ.ಟಿ.ಉಮೇಶ್, ಪದಾಧಿಕಾರಿಗಳಾದ ಗಿರೀಶ್, ಎ.ಜೆ.ಸುರೇಶ್, ಅಭಿಲಾಷ್, ಪ್ರಧಾನ್, ಶೋಭರಾಜ್, ಪ್ರಸನ್ನ, ದಿನೇಶ್ ಸೇರಿದಂತೆ ಗ್ರಾಮಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು.

ಸುಗ್ಗಿ ಉತ್ಸವದಲ್ಲಿ ಮಕ್ಕಳಿಂದ ಸುಗ್ಗಿ ಕುಣಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.