ADVERTISEMENT

ಮಡಿಕೇರಿ | ಕಾಡಾನೆ ದಾಳಿ; ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 16:22 IST
Last Updated 25 ಏಪ್ರಿಲ್ 2025, 16:22 IST

ಮಡಿಕೇರಿ/ಹಾಸನ: ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಕಾಡಾನೆ ದಾಳಿಗೆ 2ನೇ ಸಾವು ಸಂಭವಿಸಿದ್ದು, ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಅರಣ್ಯ ವ್ಯಾಪ್ತಿಯ ಬಸವನಹಳ್ಳಿ ಹಾಡಿ ಬಳಿ ಚಿಣ್ಣಪ್ಪ (76) ಮೃತಪಟ್ಟಿದ್ದಾರೆ.  ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದ ಕಾಫಿ ತೋಟದ ಮಾಲೀಕ ಷಣ್ಮುಖ (36) ಅವರೂ ಶುಕ್ರವಾರ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಎರಡೂ ಕಡೆ ಘಟನೆ ಮುಂಜಾನೆಯೇ ನಡೆದಿದೆ.

‘ನಸುಕಿನ 1.30ರ ಸಮಯದಲ್ಲಿ ತೋಟವನ್ನು ಪ್ರವೇಶಿಸಿದ ಕಾಡಾನೆಯನ್ನು ಓಡಿಸಲೆಂದು ಚಿಣ್ಣಪ್ಪ ಹೊರಬಂದಾಗ ಆನೆ ದಾಳಿ ನಡೆಸಿತು. ಅದನ್ನು ಕಾಡಿಗಟ್ಟಲಾಗಿದೆ’ ಎಂದು ವಲಯ ಅರಣ್ಯ ರಕ್ಷಣಾಧಿಕಾರಿ ರತನ್‌ ತಿಳಿಸಿದರು. ಗುರುವಾರಷ್ಟೇ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿ ಎಸ್ಟೇಟ್ ಬಳಿ ಸೆಲ್ಪಂ ಎಂಬುವವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು.

ಹಾಸನದ ಬೈಕೆರೆ ಗ್ರಾಮದಲ್ಲಿ 12 ಎಕರೆ ಕಾಫಿ ತೋಟ ಹೊಂದಿದ್ದ ಷಣ್ಮುಖ ಅವರು ಬೆಳಿಗ್ಗೆ ತೋಟಕ್ಕೆ ತೆರಳಿದಾಗ ಅವಘಡ ನಡೆದಿದೆ. ಮಧ್ಯಾಹ್ನವಾದರೂ ಮನೆಗೆ ಅವರು ವಾಪಸಾಗದೆ, ಕುಟುಂಬದವರು ಹುಡುಕಾಡಿದಾಗ ಮೃತದೇಹ ಪತ್ತೆಯಾಗಿತ್ತು. ಆನೆ ದಾಳಿಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಶವವನ್ನು ಎತ್ತದೇ ಪ್ರತಿಭಟನೆ ನಡೆಸಿದರು. 

ADVERTISEMENT

ಮೂರು ದಿನಗಳ ಹಿಂದಷ್ಟೇ ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯ ರಘು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಬೆನ್ನಿಗೇ ಮತ್ತೆ ಆನೆ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.