ಸೋಮವಾರಪೇಟೆ: ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ನೇತೃತ್ವದಲ್ಲಿ ಸದಸ್ಯರು ಭಾನುವಾರ ಶಾಸಕರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ, ತಾಲ್ಲೂಕಿನ ಅಭಿವೃದ್ಧಿ ವಿಷಯದಲ್ಲಿ ಚರ್ಚಿಸಿ, ಅಭಿವೃದ್ಧಿ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿದರು.
ಶಾಸಕರೊಂದಿಗೆ ತಾಲ್ಲೂಕು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚಿಸಲಾಯಿತು. ತಜ್ಞ ವೈದ್ಯರುಗಳನ್ನು ನೇಮಿಸಲು ಅರೋಗ್ಯ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ ಸಚಿವರು ಒಪ್ಪಿದ್ದಾರೆ. ಮೂಳೆ ತಜ್ಞ ಹಾಗೂ ಮಕ್ಕಳ ತಜ್ಞರ ನೇಮಕವಾಗಿದ್ದು, ರೋಗಿಗಳಿಗೆ ವೈದ್ಯರ ಸೇವೆ ಸಿಗಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಸಮಿತಿಗೆ ತಿಳಿಸಿದರು.
ಸೋಮವಾರಪೇಟೆಯಲ್ಲಿ ಒಳಾಂಗಣ ಕ್ರೀಡಾಂಗಣವಿಲ್ಲದೆ ಅನೇಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅನ್ಯಾಯವಾಗಿದೆ. ಸುಸಜ್ಜಿತ ಒಳಾಂಗಣ ಕ್ರೀಡಾಂಗಣಕ್ಕೆ ಅನುದಾನ ಕಲ್ಪಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಮಾದಾಪುರ ವನ್ನು ಹೋಬಳಿ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಕಾಮಗಾರಿಗೆ ಚಾಲನೆ ಸಿಗಬೇಕು. ಪಟ್ಟಣದಲ್ಲಿ ಹದಗೆಟ್ಟಿರುವ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲಾ ಪ್ರಯತ್ನ ಮಾಡುತ್ತೇವೆ. ನಾನು ಬೇಡಿಕೆಯಿಟ್ಟ ಎಲ್ಲಾ ಕಾಮಗಾರಿಗಳಿಗೆ ಸರ್ಕಾರ ಅನುದಾನ ಕಲ್ಪಿಸುತ್ತಿದೆ. ಮಳೆ ಕಡಿಮೆಯಾದ ತಕ್ಷಣ ಎಲ್ಲಾ ರಸ್ತೆ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯಲಿದೆ ಎಂದು ಶಾಸಕರು ಭರವಸೆ ನೀಡಿದರು.
ಸೋಮವಾರಪೇಟೆ ಯೋಜನಾ ಪ್ರಾಧಿಕಾರ (ಸೂಡ) ಮತ್ತು ಮಡಿಕೇರಿ ಟೌನ್ ಪ್ಲಾನಿಂಗ್ ಅಥಾರಿಟಿ (ಮೂಡ)ಯಲ್ಲಿ ಕೆಲವು ಗ್ರಾಮ ಪಂಚಾಯಿತಿಯ ಗ್ರಾಮಗಳನ್ನು ಸೇರಿಸಿಕೊಂಡಿರುವುದರಿಂದ ಜನಸಾಮಾನ್ಯರು, ರೈತರ ಅವಶ್ಯ ಕೆಲಸಗಳು ಆಗದೆ,. ಅಲೆದಾಡುವಂತಾಗಿದೆ ಎಂದು ಮನವರಿಕೆ ಮಾಡಿಕೊಡಲಾಯಿತು. ಅತಿ ಶೀಘ್ರವಾಗಿ ಸೂಡ ಮತ್ತು ಮೂಡ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ, ಕೆಡಿಪಿ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ನೀಡುವ ಭರವಸೆಯನ್ನು ಶಾಸಕರು ನೀಡಿದರು. ಸೋಮವಾರಪೇಟೆಯಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲು ಶ್ರಮಿಸಿರುವುದಕ್ಕೆ ಸಮಿತಿ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು. ಸಮಿತಿ ಸದಸ್ಯರಾದ ನಿವೃತ್ತ ತಹಶೀಲ್ದಾರ್ ಜಯರಾಮ್, ನ.ಲ.ವಿಜಯ, ಸುಲೈಮಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.