
ಮಡಿಕೇರಿ: ಜೆಡಿಎಸ್ ಚಿಹ್ನೆ ಬದಲಾವಣೆ ಅವರವರ ವಿವೇಚನೆಗೆ ಬಿಟ್ಟ ವಿಚಾರ. ಆದರೂ, ಚಿಹ್ನೆ ಬದಲಾಗುತ್ತಿದೆ ಎಂದರೆ ರೈತರಿಂದ ದೂರ ಹೋಗುತ್ತಿದ್ದಾರೆ ಎಂದಾಗಿರಬಹುದು ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಇಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
‘ಎಚ್.ಡಿ.ಕುಮಾರಸ್ವಾಮಿ ಅವರು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ನರೇಗಾ) ಬದಲಾವಣೆ ಕುರಿತು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ನಾವೂ ಚರ್ಚೆಗೆ ಸಿದ್ಧ’ ಎಂದರು.
ಮಹಾತ್ಮ ಗಾಂಧೀಜಿ ಅವರ ಕೊಡುಗೆಯನ್ನು ಮುಚ್ಚಿಹಾಕುವ ಪ್ರಯತ್ನದ ಮೊದಲ ಹೆಜ್ಜೆಯೇ ಈ ಹೆಸರು ಬದಲಾವಣೆ. ಯೋಜನೆ ಮಾರ್ಪಾಡು ಮಾಡುವ ಮೂಲಕ ಗ್ರಾಮೀಣ ಜನರ ಬದುಕಿಗೆ ಕೇಂದ್ರ ದೊಡ್ಡ ಪೆಟ್ಟನ್ನು ಕೊಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಧ್ವೇಷ ಭಾಷಣ ಮಸೂದೆಯನ್ನು ಬಿಜೆಪಿಯವರು ವಿರೋಧ ಮಾಡುತ್ತಿರುವುದಾದರೂ ಏಕೆ? ದ್ವೇಷ ಭಾಷಣ ಮಾಡುವುದಕ್ಕಾಗಿಯಾ? ಎಂದೂ ಪ್ರಶ್ನಿಸಿದರು.
ವಿರೋಧ ಪಕ್ಷದಲ್ಲಿ ನಾಲ್ಕರಿಂದ ಐದು ಗುಂಪುಗಳಿವೆ. ಇವರಿಗೆ ವಿಪಕ್ಷದಲ್ಲಿ ಕೂರುವ ಅರ್ಹತೆಯೇ ಇಲ್ಲ ಎಂದರು.
ಕೇರಳ ಸರ್ಕಾರದ ಕಡ್ಡಾಯ ಮಲಯಾಳಂ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯವರು ಹೇಳುವಂತೆ ವೇಣುಗೋಪಾಲ್ ಮಧ್ಯಪ್ರವೇಶಿಸಲು ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೇ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.