ADVERTISEMENT

ಕ್ರಿಕೆಟ್ ಟೂರ್ನಿ - ಮಡಿಕೇರಿ ರಾಯಲ್ ಪೂಜಾರಿ ತಂಡಕ್ಕೆ ಪ್ರಶಸ್ತಿ

ಜಿಲ್ಲಾ ಮಟ್ಟದ ಬಿಲ್ಲವ ಕ್ರಿಕೆಟ್ ಟೂರ್ನಿ: ದ್ವಿತೀಯ ಸ್ಥಾನ ಪಡೆದ ಮಕ್ಕಂದೂರು ಟೈಟನ್ಸ್

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 6:49 IST
Last Updated 6 ನವೆಂಬರ್ 2022, 6:49 IST
ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ನಡೆದ ಬಿಲ್ಲವ ಕ್ರೀಡಾಕೂಟದ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ರಾಯಲ್ ಪೂಜಾರಿ ಮಡಿಕೇರಿ ತಂಡ
ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ನಡೆದ ಬಿಲ್ಲವ ಕ್ರೀಡಾಕೂಟದ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ರಾಯಲ್ ಪೂಜಾರಿ ಮಡಿಕೇರಿ ತಂಡ   

ಸುಂಟಿಕೊಪ್ಪ: ನಾರಾಯಣ ಗುರುಗಳ ಜಯಂತಿ ಅಂಗವಾಗಿ ಶನಿವಾರ ಜಿಲ್ಲಾ ಮಟ್ಟದ ಬಿಲ್ಲವ ಕ್ರಿಕೆಟ್‌ ಟೂರ್ನಿಯಲ್ಲಿ ಮಡಿಕೇರಿ ರಾಯಲ್ ಪೂಜಾರಿ ತಂಡ ಗೆಲುವಿನ ನಗೆ ಬೀರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಇಲ್ಲಿನ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಮತ್ತು ಬಿಲ್ಲವ ವಿದ್ಯಾರ್ಥಿ ಘಟಕದ ಸಹಭಾಗಿತ್ವದಲ್ಲಿ ಸಮೀಪದ ಮಾದಾಪುರದ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಡಿಕೇರಿ ರಾಯಲ್ ಪೂಜಾರಿ ತಂಡವು ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 69 ರನ್ ಹೊಡೆದು ಮಕ್ಕಂದೂರು ಟೈಟನ್ಸ್ ತಂಡಕ್ಕೆ 70 ರನ್‌ಗಳ ಗುರಿ ನೀಡಿತು.

ಗುರಿ ಬೆನ್ನತ್ತಿದ್ದ ಮಕ್ಕಂದೂರು ಟೈಟನ್ಸ್ ತಂಡ 6 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 35 ರನ್ ಗಳಿಸಿ ಸೋಲೊಪ‍್ಪಿ ದ್ವಿತೀಯ ಸ್ಥಾನಕ್ಕೆ ತೃಪ್ತಿಗೊಂಡಿತು.

ADVERTISEMENT

ಉದ್ಘಾಟನೆ: ಫೈನಲ್‌ ಪಂದ್ಯವನ್ನು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಹಿರಿಯ ಸದಸ್ಯೆ ಜಯಂತಿ ಕೃಷ್ಣಪ್ಪ, ಬಿಲ್ಲವ ಸಂಘದ ಗೌರವಾಧ್ಯಕ್ಷ ಬಿ.ಕೆ.ಮೋಹನ್‌, ಸಂಘದ ಅಧ್ಯಕ್ಷ ಮಣಿ ಮುಖೇಶ್ ಉದ್ಘಾಟಿಸಿದರು.

ಸೋಮವಾರಪೇಟೆ ತಾಲ್ಲೂಕು‌ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ‌‌.ಡಿ‌.ಪದ್ಮನಾಭ ಅವರು ಬೆಳಿಗ್ಗೆ ಟೂರ್ನಿಗೆ ಚಾಲನೆ ನೀಡಿದರು.

ಉಳಿದ ಪಂದ್ಯಗಳ ವಿವರ: ಉದ್ಘಾಟನಾ ಪಂದ್ಯವು ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ಸೋಮವಾರಪೇಟೆ ಬಿರ್ವರ ಬ್ರದರ್ಸ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಸುಂಟಿಕೊಪ್ಪ ತಂಡವು‌ ನಿಗದಿತ‌ 4 ಓವರ್‌ಗಳಲ್ಲಿ 27 ರನ್‌ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಸೋಮವಾರಪೇಟೆ ತಂಡ ಕೇವಲ 3.4 ಓವರುಗಳಿಗೆ 28 ರನ್ ಹೊಡೆದು ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಸುಂಟಿಕೊಪ್ಪದ ಬಿಲ್ಲವ ಸ್ಕಾರ್ಪಿನ್ಸ್ ಮತ್ತು ಅಮ್ಮತ್ತಿ ಬಿಲ್ಲವ ಟೈಗರ್ಸ್ ನಡುವೆ ನಡೆದಎರಡನೇ ಪಂದ್ಯದಲ್ಲಿ ಅಮ್ಮತ್ತಿ ತಂಡವು ಜಯಗಳಿಸಿತು.

ಬಿಲ್ಲವ ಪೆಂಥರ್ಸ್ ಸುಂಟಿಕೊಪ್ಪ ಮತ್ತು ಚಂದನ್ ಬ್ರದರ್ಸ್ ಅಮ್ನತ್ತಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಮ್ಮತ್ತಿ ತಂಡ ಜಯಗಳಿಸಿತ್ತು.

ರಾಯಲ್ ಪೂಜಾರಿ ಮಡಿಕೇರಿ ಮತ್ತು ಚಂದನ್ ಬ್ರದರ್ಸ್ ಅಮ್ಮತ್ತಿ ನಡುವೆ ನಡೆದಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಡಿಕೇರಿ ತಂಡ ನಿಗದಿತ 5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿತು. ಆದರೆ, ಅಮ್ಮತ್ತಿ ತಂಡವು 5 ಓವರುಗಳಿಗೆ 28 ರನ್‌ ಮಾತ್ರ ಗಳಿಸಿ ಸೋಲಪ್ಪಿಕೊಂಡಿತು. ರಾಯಲ್ ಚಾಲೆಂಜರ್ಸ್ ತಂಡ ಫೈನಲ್‌ ಪ್ರವೇಶಿಸಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಮಕ್ಕಂದೂರು ತಂಡವು ನಿಗದಿತ 5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತು. 58 ರನ್‌ಗಳ ಬೆನ್ನಟ್ಟಿದ್ದ ಅಮ್ಮತ್ತಿ ತಂಡವು 4 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತು. ಮಕ್ಕಂದೂರು ತಂಡ ಫೈನಲ್ ಪ್ರವೇಶಿಸಿತ್ತು.

ಫೈನಲ್‌ ಪಂದ್ಯದ ಕಾಲಕ್ಕೆ ಸಂಘದ ಕಾರ್ಯದರ್ಶಿ ವೆಂಕಪ್ಪ ಕೋಟ್ಯನ್, ಸದಸ್ಯರಾದ ನಾಗೇಶ್ ಪೂಜಾರಿ, ಬಾಲಕೃಷ್ಣ, ದೇವಪ್ಪ, ದಿನೇಶ್ ತೊಂಡೂರು, ಬಿಲ್ಲವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಂ, ಕಾರ್ಯದರ್ಶಿ ಯಶ್ವಿತ್ ಪೂಜಾರಿ, ಹರ್ಷಿತ್ ಪೂಜಾರಿ, ಗಗನ್ ಪೂಜಾರಿ, ಜೀವನ್ ಪೂಜಾರಿ, ಹಿರಿಯರಾದ ಕೃಷ್ಣಪ್ಪ ಪೂಜಾರಿ, ಕ್ರೀಡಾ ಸಂಚಾಲಕ ಹರೀಶ್ ಬಿರ್ವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.