ವಿರಾಜಪೇಟೆ: ಪಟ್ಟಣದಲ್ಲಿ ನಡೆದ ವಿರಾಜಪೇಟೆ ಕ್ರಿಕೆಟ್ ಉತ್ಸವದಲ್ಲಿ (ವಿ.ಸಿ.ಎಫ್) ಲ್ಯಾಂಪೈರಿಡ್ ತಂಡವು ಸೋಮವಾರ ನಡೆದ ಫೈನಲ್‌ನಲ್ಲಿ ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕಳೆದ 8 ದಿನಗಳಿಂದ ನಡೆಯುತ್ತಿದ್ದ ಐ.ಪಿ.ಎಲ್ ಮಾದರಿಯ ಟೆನಿಸ್ ಬಾಲ್ ಕ್ರಿಕೆಟ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲ್ಯಾಂಪೈರಿಡ್ ತಂಡ 11 ರನ್‌ಗಳಿಂದ ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡವನ್ನು ಮಣಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲ್ಯಾಂಪೈರಿಡ್ ತಂಡ ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 70 ರನ್ ಗಳಿಸಿತು. 71 ರನ್‌ಗಳ ಗುರಿ ಪಡೆದ ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡ ನಿಗದಿತ 10 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 59 ರನ್ ಗಳಿಸಿತು.
ಲ್ಯಾಂಪೈರಿಡ್ ತಂಡದ ಪರವಾಗಿ ಶಾರೂಖ್ 20, ಮನು 19 ಹಾಗೂ ಮಹೇಶ್ 14 ರನ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಶಾರುಖ್ 3 ಹಾಗೂ ಜುನೈದ್ 2 ವಿಕೇಟ್ ಪಡೆದರೆ, ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡದ ಪರವಾಗಿ ಹರ್ಷದ್ 28 ಹಾಗೂ ನೀತು ಆಳ್ವ 10 ರನ್ ಹಾಗೂ ಬೌಲಿಂಗ್ ವಿಭಾಗದಲ್ಲಿ ರಜಾಕ್ 2 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.
ಪ್ರಶಸ್ತಿ ಪಡೆದ ಲ್ಯಾಂಪೈರಿಡ್ ತಂಡ ಆಕರ್ಷಕ ಟ್ರೋಫಿ ಹಾಗೂ ₹ 1 ಲಕ್ಷ ನಗದು ಮತ್ತು ದ್ವಿತೀಯ ಸ್ಥಾನ ಪಡೆದ ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡ ಆಕರ್ಷಕ ಟ್ರೋಫಿ ಹಾಗೂ ₹ 60 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡಿತು. ಲೀಗ್‌ನಲ್ಲಿ ಗ್ಲೋಬಲ್ ಪೈರೆಟ್ಸ್, ತ್ರಿ ಸ್ಟಾರ್, ಟೀಂ ಮಹಾಮೇಳ, ಟೀಂ ಎ ಕ್ಯೂಬ್, ಟೀಂ ಇ.ಎಸ್.ಪಿ.ಎನ್, ಸುಶಾಂತ್ ಫ್ರೆಂಡ್ಸ್, ಟೀಂ ಮೆಟ್ರೊ, ಆರ್.ಸಿ.ವಿ ರಾಯಲ್ ಚಾಲೆಂಜರ್ಸ್, ಲಿಥಿನ್ ಕ್ರಿಕೆಟರ್ಸ್, ಟೀಂ ಎನ್.ವೈ.ಸಿ ಸೇರಿದಂತೆ ಒಟ್ಟು 12 ತಂಡಗಳು ಭಾಗವಹಿಸಿದ್ದವು.
ಅಂತಿಮ ನಾಲ್ಕರ ಘಟಕ್ಕೆ ಲ್ಯಾಂಪೈರಿಡ್, ಲೀಲಾಕಾನ್ ಮಿಸ್ಟಿಲ್ಯಾಂಡ್, ಗ್ಲೋಬಲ್ ಪೈರೆಟ್ಸ್ ಹಾಗೂ ಟೀಂ ಮೆಟ್ರೊ ತಂಡ ಪ್ರವೇಶ ಪಡೆದಿತ್ತು. ಸಮಾರೋಪ ಸಮಾರಂಭದಲ್ಲಿ ಪಿ.ಮುತ್ತಪ್ಪ, ಪುರಸಭೆಯ ಸದಸ್ಯರಾದ ಮಹಮದ್ ರಾಫಿ, ಡಿ.ಪಿ.ರಾಜೇಶ್, ಶಶಿ ಕುಮಾರ್, ರಜತ್, ಟೂರ್ನಿಯ ಆಯೋಜಕರಾದ ರಗ್ಬಿ ಅಂತರರಾಷ್ಟ್ರೀಯ ಮಾಜಿ ಆಟಗಾರ ಮಾದಂಡ ತಿಮ್ಮಯ್ಯ, ಪುರಸಭೆಯ ನಾಮನಿರ್ದೇಶಿತ ಸದಸ್ಯ ಅತೀಫ್ ಮನ್ನ ಹಾಗೂ ನಿತಿನ್ ಲೇಪು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.