ADVERTISEMENT

ಕುಶಾಲನಗರ: ಬೀಜೋತ್ಪಾದನಾ ಘಟಕ ಸ್ಥಾಪನೆ

ಕೂಡಿಗೆ ಕೃಷಿ ಫಾರಂಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2020, 10:17 IST
Last Updated 8 ಮೇ 2020, 10:17 IST
ಕೂಡಿಗೆ ಕೃಷಿ ಫಾರಂಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು
ಕೂಡಿಗೆ ಕೃಷಿ ಫಾರಂಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು   

ಕುಶಾಲನಗರ: ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ ಕೃಷಿ ಫಾರಂ ಆವರಣದಲ್ಲಿ ಮಾದರಿ ಬೀಜೋತ್ಪಾದನಾ ಘಟಕ ಸ್ಥಾಪಿಸುವ ಚಿಂತನೆ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೂಡಿಗೆ ಕೃಷಿ ಕ್ಷೇತ್ರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಚಿವರು ಪರಿಶೀಲಿಸಿದರು.

ಕೃಷಿ ಇಲಾಖೆಗೆ ಸೇರಿದೆ 25 ಎಕರೆ ಪ್ರದೇಶದ ಗದ್ದೆಗಳ ಜಾಗವನ್ನು ವೀಕ್ಷಿಸಿದ ಅವರು, ಮಣ್ಣು ಆರೋಗ್ಯ ಕೇಂದ್ರದ ಮಣ್ಣು ಪರೀಕ್ಷೆಯ ಹೊಸ ಮಾದರಿ ಪರೀಕ್ಷಾ ಘಟಕಗಳನ್ನು ಪರಿಶೀಲಿಸಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಜಿಲ್ಲೆಯ ರೈತರಿಗೆ ಬೇಕಾಗುವ ಎಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳನ್ನು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಕೃಷಿ ಕ್ಷೇತ್ರದ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ಪ್ರಾರಂಭಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೃಷಿ ಇಲಾಖೆಯ ಜಾಗವನ್ನು ಬೇರೆ ಉದ್ದೇಶಕ್ಕೆ ನೀಡುವ ಪ್ರಶ್ನೆಯೇ ಇಲ್ಲ. ಈ ಜಾಗದಲ್ಲಿ ಕೃಷಿಗೆ ಪೂರಕವಾದ ಚಟುವಟಿಕೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ಮಿನಿ ವಿಮಾನ ನಿಲ್ದಾಣದ ಪ್ರಾರಂಭ ವಿಷಯ ಈಗಷ್ಟೇ ನನ್ನ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ಕೆ.ರಾಜು, ಸೋಮವಾರಪೇಟೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್. ರಾಜಶೇಖರ್, ಉಪ ಕೃಷಿ ವಿಶೇಷ ನಿರ್ದೇಶಕ ಎ.ಸಿ.ಮಂಜು, ಕೂಡಿಗೆ ಕೃಷಿ ಕ್ಷೇತ್ರದ ಅಧಿಕಾರಿ ಮಾದವರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.