ADVERTISEMENT

ಕೊಡಗು | ಉತ್ಸವಕ್ಕೆ ಅಣಿಯಾದ ಭಗವತಿ ದೇಗುಲ

ಜಿಲ್ಲಾಡಳಿತ, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ದೇಗುಲ ಅಭಿವೃದ್ಧಿ

ಸಿ.ಎಸ್.ಸುರೇಶ್
Published 24 ಮಾರ್ಚ್ 2024, 6:59 IST
Last Updated 24 ಮಾರ್ಚ್ 2024, 6:59 IST
ಜೀರ್ಣೋದ್ಧಾರಗೊಂಡ ನಾಪೋಕ್ಲು ಸಮೀಪದ ಬೆಟ್ಟಗೇರಿ ಗ್ರಾಮದಲ್ಲಿನ ಭಗವತಿ ದೇವಾಲಯ.
ಜೀರ್ಣೋದ್ಧಾರಗೊಂಡ ನಾಪೋಕ್ಲು ಸಮೀಪದ ಬೆಟ್ಟಗೇರಿ ಗ್ರಾಮದಲ್ಲಿನ ಭಗವತಿ ದೇವಾಲಯ.   

ನಾಪೋಕ್ಲು: ಸಮೀಪದ ಬೆಟ್ಟಗೇರಿ ಗ್ರಾಮದಲ್ಲಿನ ಭಗವತಿ ದೇವಾಲಯವು ವಾರ್ಷಿಕ ಉತ್ಸವಕ್ಕೆ ಅಣಿಯಾಗಿದೆ. ಮಾರ್ಚ್ 24ರಿಂದ ಎರಡು ದಿನಗಳ ಕಾಲ ಇಲ್ಲಿ ನಡೆಯುವ ವಿವಿಧ ಧಾರ್ಮಿಕ ಕೈಂಕರ್ಯಗಳಿಗೆ ಭರದ ಸಿದ್ಧತೆಗಳು ಪೂರ್ಣಗೊಂಡಿವೆ.

ಶಾಸ್ತಾವು ತೆರೆ, ಭಗವತಿ ಅಯ್ಯಪ್ಪ ತೆರೆ, ಮೇಲೇರಿ ಅಗ್ನಿಸ್ಪರ್ಶ, ಅಂಜಿ ಕುಟ್ಟಿ ಮೂರ್ತಿ ಕರಿಬಾಳ ಹಾಗೂ ನುಚ್ಚಟ್ಟೆ ತೆರೆಗಳು ವಿಷ್ಣುಮೂರ್ತಿಯ ಕೆಂಡಸೇವೆ ಹಾಗೂ ಗುಳಿಗ ರಾಜನ ಕೋಲ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಲವಾರು ಮಂದಿ ಭಾಗಿಯಾಗಲಿದ್ದಾರೆ.

ಇದೀಗ ಗ್ರಾಮಸ್ಥರ ನೆರವಿನಿಂದ ದೇಗುಲವು ಜೀರ್ಣೋದ್ಧಾರಗೊಂಡಿದ್ದು, ಕಂಗೊಳಿಸುತ್ತಿದೆ.

ADVERTISEMENT

ಬೆಟ್ಟಗೇರಿ ಭಗವತಿ ದೇವಸ್ಥಾನ ಪಟ್ಟಣದಿಂದ ಸುಮಾರು 1 ಕಿ.ಮೀ. ದೂರದಲ್ಲಿ ಇದೆ. ದುರ್ಗಮ ಹಾದಿಯಲ್ಲಿ ಬೆಟ್ಟದ ಮೇಲೆ ಇರುವ ದೇವಸ್ಥಾನವನ್ನು ತಲುಪುವುದು ಕಷ್ಟ ಸಾಧ್ಯವಾಗಿತ್ತು. ಈಚೆಗೆ ಸರ್ಕಾರದ ಅನುದಾನದಿಂದ ಅರ್ಧ ಕಿಲೋಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ದೇವಸ್ಥಾನದ ನೂತನ ಆಡಳಿತ ಮಂಡಳಿಯ ಮುತುವರ್ಜಿಯಿಂದ ದೇವಸ್ಥಾನದ ಪಾಳು ಬಿದ್ದ ಬಾವಿಯನ್ನು ಶುಚಿಗೊಳಿಸಿ ಮೋಟಾರ್ ಅಳವಡಿಸಲಾಗಿದೆ. ಹಲವು ಅಭಿವೃದ್ಧಿ ಕಾರ್ಯ ನಡೆಸುವ ಮೂಲಕ ಭಕ್ತರನ್ನು ದೇಗುಲದೆಡೆಗೆ ಸೆಳೆಯುವಲ್ಲಿ ನೂತನ ಆಡಳಿತ ಮಂಡಳಿ ಯಶಸ್ವಿಯಾಗಿದೆ.

ಜಿಲ್ಲಾಡಳಿತ, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ದೇವಸ್ಥಾನಕ್ಕೆ ಕಾಂಕ್ರೀಟ್ ರಸ್ತೆ, ಒಳ ಚರಂಡಿಗಳು ವಿದ್ಯುತ್ ಸಂಪರ್ಕ, ದೇವಸ್ಥಾನದಲ್ಲಿ ಒಳಾಂಗಣಬಾವಿ, ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.

ಸಮುದಾಯ ಭವನ, ಹೊರಾಂಗಣ ತಡೆಗೋಡೆ, ಅರ್ಚಕರಿಗೆ ನಿವಾಸ, ಕಾಂಕ್ರೀಟ್ ರಸ್ತೆ ನಿರ್ಮಾಣ, ಕಾಂಕ್ರೀಟ್ ಚರಂಡಿ ನಿರ್ಮಾಣ, ದೇವಸ್ಥಾನಕ್ಕೆ ಉದ್ಯಾನ, ವಿಷ್ಣುಮೂರ್ತಿ ದೇವರ ಗುಡಿಯ ಪುನರ್ ನಿರ್ಮಾಣ ಶೌಚಾಲಯ ನಿರ್ಮಾಣ, ಉಗ್ರಾಣದ ನಿರ್ಮಾಣ ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಪೌಡೆಂಡ ಡಾಲಿ ಭೀಮಯ್ಯ ತಿಳಿಸಿದರು.

ಶಿಥಿಲಗೊಂಡಿದ್ದ ನಾಪೋಕ್ಲು ಸಮೀಪದ ಬೆಟ್ಟಗೇರಿ ಗ್ರಾಮದಲ್ಲಿನ ಭಗವತಿ ದೇವಾಲಯ.

ಬೆಟ್ಟಗೇರಿಯಿಂದ 1 ಕಿ.ಮೀ.ದೂರದಲ್ಲಿರುವ ಭಗವತಿ ದೇವಸ್ಥಾನ ದುರ್ಗಮ ಹಾದಿಯಲ್ಲಿರುವ ದೇಗುಲ ದೇಗುಲದಲ್ಲಿ ನಡೆದಿದೆ ಹಲವು ಅಭಿವೃದ್ಧಿ ಕಾರ್ಯ

ವಾರ್ಷಿಕ ಉತ್ಸವ ಇಂದಿನಿಂದ ಮಾರ್ಚ್ 24 ಮತ್ತು 25 ರಂದು ದೇವರ ವಾರ್ಷಿಕ ಉತ್ಸವ ನಡೆಯಲಿದ್ದು 24ರಂದು ಪಟ್ಟಣಿ ಹಗಲು ವಿಶೇಷ ಪೂಜಾ ಕೈಂಕರ್ಯಗಳು ಮಧ್ಯಾಹ್ನ 1 ಗಂಟೆಗೆ ಕಟ್ರತಂಡ ಕುಟುಂಬದ ಭಂಡಾರದ ಮನೆಯಿಂದ ಭಂಡಾರ ಹೊರಡುವುದು 2 ಗಂಟೆಗೆ ಶಾಸ್ತಾವು ತೆರೆ ಸಂಜೆ 5 ಗಂಟೆಗೆ ಆಂಬಲದಲ್ಲಿ ಭಗವತಿ ಅಯ್ಯಪ್ಪ ತೆರೆ ಸಂಜೆ 6 ಗಂಟೆಗೆ ದೇವರು ಬನಕ್ಕೆ ಹೋಗುವುದು 7.30ಕ್ಕೆ ಚೌಂಡಿ ತೋತ ಹಾಗೂ ರಾತ್ರಿ 9 ಗಂಟೆಗೆ ಮೇಲೇರಿ ಅಗ್ನಿಸ್ಪರ್ಶ ಮುಂಜಾನೆ ಮಂದಣ್ಣ ಮೂರ್ತಿ ಅಂಜಿ ಕುಟ್ಟಿ ಮೂರ್ತಿ ಕರಿಬಾಳ ಹಾಗೂ ನುಚ್ಚಟ್ಟೆ ತೆರೆಗಳು ನಡೆಯಲಿವೆ. ಮಾರ್ಚ್ 25ರಂದು ಬೆಳಿಗ್ಗೆ 11 ಗಂಟೆಗೆ ವಿಷ್ಣುಮೂರ್ತಿಯ ಕೆಂಡಸೇವೆ ಹಾಗೂ ಗುಳಿಗ ರಾಜನ ಕೋಲ ನಡೆಯಲಿದೆ. ಮಧ್ಯಾಹ್ನ 12.30ರಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.