ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಕೆಲಹೊತ್ತಿನ ಬಳಿಕ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ, ಪ್ರತಿಭಟನೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಸಿದ್ದರಾಮಯ್ಯ ಅವರಿಗೆ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್, ‘ನ್ಯಾಯಯುತವಾದ ನಿರ್ಧಾರ ಕೈಗೊಂಡಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಟೀಕಾಪ್ರಹಾರ ನಡೆಸಿ ಮನಸ್ಸಿಗೆ ಬಂದಂತೆ ಮಾತನಾಡಿರುವುದು ಸರಿಯಲ್ಲ’ ಎಂದು ಖಂಡಿಸಿದರು.
ಸಿದ್ದರಾಮಯ್ಯ ಅವರ ಪತ್ನಿ 14 ನಿವೇಶನಗಳನ್ನು ಪಡೆದಿರುವ ಕುರಿತು ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಆರೋಪ ಬಂದಿರುವುದರಿಂದ ತನಿಖೆ ನಡೆಸಬೇಕಾದುದು ಸಹಜ ಧರ್ಮ. ಇದನ್ನೇ ಸರಿಯಲ್ಲ ಎಂದರೆ ಹೇಗೆ ಎಂದೂ ಪ್ರಶ್ನಿಸಿದರು.
ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆಗೆ ಸಹಕಾರ ಕೊಡಬೇಕು. ಅದನ್ನು ಬಿಟ್ಟು ರಾಜ್ಯಪಾಲರ ಕ್ರಮವನ್ನೇ ತಪ್ಪು ಎನ್ನುವುದು ಸರಿಯಲ್ಲ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿಟ್ಟ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಬಳಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ತಾನೇ ತಾನಾಗಿ ತಾನು ದಲಿತ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ. ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದೂ ಅವರು ಆರೋಪಿಸಿದರು.
ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ಮುಖಂಡರಾದ ಎಸ್.ಜಿ.ಮೇದಪ್ಪ, ರಾಬಿನ್ ದೇವಯ್ಯ, ಸುವಿನ್ ಗಣಪತಿ, ಅನಿತಾ ಪೂವಯ್ಯ, ಯಮುನಾ ಚೆಂಗಪ್ಪ, ಸವಿತಾ ರಾಕೇಶ್, ಉಮಾ ಪ್ರಭು, ಕನ್ನಂಡ ಸಂಪತ್, ಕವನ್ ಕಾರ್ಯಪ್ಪ, ನೆಲ್ಲಿರ ಚಲನ್, ತಳೂರು ಕಿಶೋರ್‌ಕುಮಾರ್, ಮಹೇಶ್ ಜೈನಿ, ಕನ್ನಿಕೆ, ಮನು ಮಂಜುನಾಥ್, ವಿ.ಕೆ.ಅರುಣ್, ವಿ.ಕೆ.ಜಗದೀಶ್, ನಾಗೇಶ್ ಕುಂದಲ್ಪಾಡಿ, ಬಿ.ಬಿ ಭಾರತೀಶ್, ಉಮೇಶ್ ಸುಬ್ರಮಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.