ವಿರಾಜಪೇಟೆ: ‘ರಕ್ತದಾನದಿಂದ ಮತ್ತೊಬ್ಬರ ಜೀವ ರಕ್ಷಿಸುವುದರೊಂದಿಗೆ, ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಪಟ್ಟಣದ ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ ಮತ್ತು ಮುದ್ರಾಣಾಲಯದ ಕಟ್ಟಡದ ಸಭಾಂಗಣದಲ್ಲಿ ಈಚೆಗೆ ವಿರಾಜಪೇಟೆಯ ಸಹಾರ ಫ್ರೆಂಡ್ಸ್ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಎಲ್ಲಾ ದಾನಗಳಲ್ಲಿಯೂ ಶ್ರೇಷ್ಠ ಎನಿಸಿಕೊಂಡಿದೆ. ರಕ್ತದಾನದಂತಹ ಉತ್ತಮ ಕಾರ್ಯಕ್ರಮ ಜನರಲ್ಲಿ ಜಾಗೃತಿಯನ್ನು ಮೂಡಿಸುವಂತಿದ್ದು, ಇದರಿಂದ ಸಮಾಜ ಉತ್ತಮ ದಿಕ್ಕಿನಲ್ಲಿ ಮುನ್ನಡೆಯಲು ಸಹಾಯವಾಗಲಿದೆ. ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.
70 ಬಾರಿ ರಕ್ತದಾನ ಮಾಡಿದ ರವಿ ಕುಮಾರ್ ಹಾಗೂ 25 ಬಾರಿ ರಕ್ತದಾನ ಮಾಡಿದ ಗೋಣಿಕೊಪ್ಪಲಿನ ಪ್ರೀಯ ಸುರೇಂದ್ರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾರ ಫ್ರೆಂಡ್ಸ್‌ನ ಸಿ.ಎ.ನಾಸಿರ್ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್, ಪುರಸಭೆಯ ಸದಸ್ಯರಾದ ಎಸ್.ಎಚ್.ಮತೀನ್, ಮಹಮ್ಮದ್ ರಾಫಿ, ಅಗಸ್ಟೀನ್ ಬೆನ್ನಿ, ಪ್ರಗತಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಾದಂಡ ತಿಮ್ಮಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರದ ಕರುಂಬಯ್ಯ, ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ ಮತ್ತು ಮುದ್ರಾಣಾಲಯ ನಿಯಮಿತ ಅಧ್ಯಕ್ಷ ಸಿ.ಬೋಸ್ ವಿಶ್ವನಾಥ್, ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಎ.ವಿನೂಪ್ ಕುಮಾರ್, ಅಬ್ದುಲ್ ರವೊಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.